ಬ್ರಾಹ್ಮಣ ಸಮಾಜ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ನಮ್ಮ ತಪ್ಪು ಅರ್ಥ ಮಾಡಿಕೊಂಡು ಒಂದಾಗಿದ್ದೇವೆ: ರಾಮದಾಸ್

ಮೈಸೂರು,ಸೆಪ್ಟೆಂಬರ್,19,2020 : ಬ್ರಾಹ್ಮಣ ಸಮಾಜವು ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ನಮ್ಮ, ನಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಂಡು ಒಂದಾಗಿದ್ದೇವೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ನಗರದ ಕೃಷ್ಣಧಾಮದಲ್ಲಿ ಬ್ರಾಹ್ಮಣರ ಸಂಘ ಸಂಸ್ಥೆಗಳ ವತಿಯಿಂದ ಶನಿವಾರ ಆಯೋಜಿಸಿದ ಸನ್ಮಾನ ಕಾರ‌್ಯಕ್ರಮದಲ್ಲಿ ಮುಡಾ ಅಧ್ಯಕ್ಷರಾಗಿ ನೇಮಕಗೊಂಡ ವಿಪ್ರ ಮುಖಂಡ ಎಚ್.ವಿ.ರಾಜೀವ್ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಕರಾಗಿ ನೇಮಕರಾದ ವೇದ ಬ್ರಹ್ಮಶ್ರೀ ಭಾನುಪ್ರಕಾಶ್ ಶರ್ಮಾ, ಸಿ.ವಿ.ಗೋಪಿನಾಥ್, ಎಂ.ಆರ್.ಬಾಲಕೃಷ್ಣ ಅವರನ್ನು ಸನ್ಮಾನ ಮಾಡಿ ಅವರು ಮಾತನಾಡಿದರು.
ಧೃವಗಳ ರೀತಿಯಲ್ಲಿದ್ದವರು ಅದು ಹೇಗೆ ಜೊತೆಯಾಗಿ ಕುಳಿತಿದ್ದಾರೆ ಎಂದು ಆಶ್ಚರ್ಯವಾಗಬಹುದು. ರಾಜಕೀಯದಲ್ಲಿ ಸ್ವಾರ್ಥ ಸಹಜ. ನಮ್ಮ, ನಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಂಡು ಒಂದಾಗಿದ್ದೇವೆ. ಸಮಾಜವು ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಅದನ್ನು ಅರ್ಥಮಾಡಿಕೊಂಡು ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದರು.

ನಾವು ಕೇವಲ ಅಧಿಕಾರದಿಂದ ಒಂದಾಗಿಲ್ಲ, ಹೃದಯಪೂರ್ವಕವಾಗಿ ಜೊತೆಯಾಗಿದ್ದೇವೆ. 40 ವರ್ಷಗಳ ನಂತರ ಮುಡಾ ಅಧ್ಯಕ್ಷ ಸ್ಥಾನವು ವಿಪ್ರ ಸಮುದಾಯಕ್ಕೆ ದೊರೆತಿರುವುದು ಸಂತೋಷದ ವಿಚಾರ. ಸಹಕಾರಿ ಕ್ಷೇತ್ರದ ಅನುಭವವಿರುವ ರಾಜೀವ್ ಅವರು ಆ ಸ್ಥಾನದ ಘನತೆಯನ್ನು ಹೆಚ್ಚಿಸುವಂತೆ ಕಾರ್ಯ ನಿರ್ವಹಿಸುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ತ್ರಿಮತಸ್ಥರ ಭವನ ನಿರ್ಮಾಣ ಬೇಡಿಕೆ ಶೀಘ್ರವೇ ಈಡೇರಿಸಿಲು ಶ್ರಮಿಸಲಾಗುವುದು. ರಾಜ್ಯ ಮತ್ತು ಕೇಂದ್ರ ಸರಕಾರವು ಸಬ್ಸಿಡಿ ರೂಪದಲ್ಲಿ ಮನೆಗಳ ನೀಡಲು ತೀರ್ಮಾನಿಸಿದೆ. ಸೂಕ್ತ ಸಮಯಕ್ಕೆ ಅರ್ಜಿ ಹಾಕಿ ಮನೆಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ ಅನೇಕರ ಸಹಕಾರದಿಂದ ಈ ಸ್ಥಾನ ದೊರೆತಿದೆ. ವಿವೇಕದಿಂದ ಮುಂಚೂಣಿಯಲ್ಲಿ ನಡೆಯುವವರಲ್ಲಿ ವಿಪ್ರರು ಪ್ರಮುಖರಾಗಿದ್ದು, ರಾಮದಾಸ್, ಮಾ.ವಿ.ರಾಮ್‌ಪ್ರಸಾದ್ ಅವರನ್ನು ಒಟ್ಟಾಗಿಸಿಕೊಂಡು ರಾಜಕೀಯದಲ್ಲಿ ಸಾಗುತ್ತೇನೆ ಎಂದರು.
ಶಾಸಕ ಎಸ್.ಎ.ರಾಮದಾಸ್ ಮಂತ್ರಿಯಾಗುವ ಸಾಧ್ಯತೆಯಿದ್ದು, ಆ ಸ್ಥಾನ ಅವರಿಗೆ ದೊರೆಯಲಿ ಎಂದು ನಾವು ಒತ್ತಾಯಿಸಬೇಕಿದೆ. ನಮ್ಮ ನ್ಯೂನ್ಯತೆಗಳು ನಮ್ಮವರಿಗೆ ಮಾರಕವಾಗಬಾರದು. ಆದರ್ಶಗಳು ನಮ್ಮನ್ನು ಉನ್ನತಸ್ಥಾನಕ್ಕೆ ತಲುಪಿಸುತ್ತವೆ. ವಿಭಿನ್ನವಾದ ಆಲೋಚನೆಗಳ ಮೂಲಕ ಎಲ್ಲರಿಗೂ ಒಳಿತಾಗುವಂತೆ ಮಾಡಬೇಕು ಎಂದರು.

ನನ್ನ ಸ್ಥಾನವು ಸವಾಲಿನ ಕೆಲಸವಾಗಿದೆ. ಬಾಡಿಗೆ ಮನೆಯಲ್ಲಿರುವವರಿಗೆ ಸ್ವಂತ ಸೂರು ಕೊಡಿಸುವ ಜವಾಬ್ದಾರಿ ನನ್ನದಾಗಿದೆ. ಸಮಾಜದ ಎಲ್ಲಾ ಬಡವರಿಗೆ ಸೂರು ಒದಗಿಸಿಕೊಡಲು ಶ್ರಮಿಸುತ್ತೇನೆ. ಬಿಡಿ ಮನೆ, ಗುಂಪು ಮನೆ ಯೋಜನೆ ಮೂಲಕ ಮನೆಗಳನ್ನು ಒದಗಿಸಿಕೊಡಲು ಸಿದ್ಧತೆ ನಡೆಸಲಾಗುತ್ತಿದೆ. ಮುಡಾ ವತಿಯಿಂದ ನೀಡುವ ಮನೆಗಳು ಗುಣಾತ್ಮಕವಾಗಿರಬೇಕು. ಈಗಾಗಲೇ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಎಚ್.ಡಿ.ಕೋಟೆ ರಸ್ತೆಯಲ್ಲಿ ಸುಮಾರು 700 ರಿಂದ 800 ಎಕರೆ ಭೂಮಿ ಗುರುತಿಸಲಾಗಿದ್ದು, ನಗರವನ್ನು ಸುಂದರವಾಗಿ ನಿರ್ಮಿಸಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಇಳೈ ಆಳ್ವಾರ್ ಸ್ವಾಮೀಜಿ, ಪಾಲಿಕೆ ಸದಸ್ಯರಾದ ಮಾ.ವಿ.ರಾಮ್‌ಪ್ರಸಾದ್, ಎಂ.ಸಿ.ರಮೇಶ್, ಮಾಜಿ ಮೇಯರ್ ಆರ್.ಜೆ.ನರಸಿಂಹ ಅಯ್ಯಂಗಾರ್, ವಿಕ್ರಂ ಅಯ್ಯಂಗಾರ್ ಇತರರು ಉಪಸ್ಥಿತರಿದ್ದರು.