ಕೆ.ಆರ್.ಕ್ಷೇತ್ರದಲ್ಲಿ ಕಣ್ಣಿನ ಉಚಿತ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಶಾಸಕ ರಾಮದಾಸ್ ಚಾಲನೆ

ಮೈಸೂರು, ಫೆ‍ಬ್ರವರಿ 04, 2023 (www.justkannada.in): ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಆಯೋಜಿಸಿರುವ ಕಣ್ಣಿನ ಉಚಿತ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಶಾಸಕ ರಾಮದಾಸ್ ಚಾಲನೆ ನೀಡಿದರು.

ನಗರದ ತುಳಸೀದಾಸ್ ದಾಸಪ್ಪ ಆಸ್ಪತ್ರೆಯಲ್ಲಿ ಶಿಬಿರ ಏರ್ಪಡಿಸಲಾಗಿದ್ದು, ಪ್ರತಿನಿತ್ಯ 30 ಮಂದಿಯಂತೆ ಒಟ್ಟು 300 ಜನರಿಗೆ ಹತ್ತು ದಿನಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಲಿದೆ.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ರಾಮದಾಸ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ದೇಶದಲ್ಲಿ ಬಹಳಷ್ಟು ವಿಚಾರಗಳಿಗೆ ಆದ್ಯತೆ ನೀಡಿದ್ದಾರೆ. ಆ ಪೈಕಿ ಕೃಷಿಗೆ ಮೊದಲ ಸ್ಥಾನ. ನಂತರದಲ್ಲಿ ಮೂಲಸೌಕರ್ಯ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅದರಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ರಾಜ್ಯದಲ್ಲಿ ನೇತ್ರಜ್ಯೋತಿ ಕಾರ್ಯಕ್ರಮ ಕೊಟ್ಟಿದ್ದಾರೆ. ಅದರ ಯಶಸ್ವಿ ಅನುಷ್ಠಾನ ಕಾರ್ಯ ನಮ್ಮ ಕ್ಷೇತ್ರದಲ್ಲಿ ಆಗಿದೆ ಎಂದು ಹೇಳಿದರು.

ಕಳೆದ ಕೆಲ ದಿನಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಸರ್ಕಾರಿ ಸವಲತ್ತುಗಳ ಅದಾಲತ್, ಆಧಾರ್ ಕಾರ್ಡ್ ನವೀಕರಣ, ವಾರ್ಡ್ ಸಮಸ್ಯೆ ಮತ್ತು ಪರಿಹಾರ, ಆರೋಗ್ಯ ತಪಾಸಣೆ, ಉಚಿತ ಮಧುಮೇಹ ಮತ್ತು ಕಣ್ಣಿನ ತಪಾಸಣೆ ಶಿಬಿರ ಮಾಡಲಾಗಿದೆ. ಅಲ್ಲಿ ಕಂಡು ಬಂದ ಅಂಶಗಳ ಪ್ರಕಾರ ಕ್ಷೇತ್ರ ವ್ಯಾಪ್ತಿಯಲ್ಲಿ ಸರಿಸುಮಾರು ೬೦ ಸಾವಿರ ಮಂದಿ ಸಕ್ಕರೆ ಅಂಶ ಪ್ರಮಾಣ ಹೆಚ್ಚಳದಿಂದ ಬಳಲುತ್ತಿದ್ದಾರೆ. ಅದರಿಂದ ಇನ್ನಿತರ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಅದನ್ನು ತಪ್ಪಿಸುವ ಸಲುವಾಗಿ ಈ ರೀತಿಯ ಆರೋಗ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಎಲ್ಲರಿಗೂ ಸಲ್ಲಬೇಕಾದ ಯೋಜನೆ ಎಂದರು.

ಪ್ರತಿನಿತ್ಯ 3೦ ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗುವುದು. ‌ಅಂದಾಜು 300 ಮಂದಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಅದಕ್ಕಾಗಿ ತುಳಸೀದಾಸ್ ದಾಸಪ್ಪ ಆಸ್ಪತ್ರೆಯಲ್ಲಿ ವಿಶೇಷ ಘಟಕ ತೆರೆಯಲಾಗಿದೆ. ಮಾತ್ರವಲ್ಲ, ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಉಚಿತ ಔಷಧ ಹಾಗೂ ಕನ್ನಡಕ ನೀಡಲಾಗುತ್ತದೆ ಎಂದು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್, ನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.