ಮೈಸೂರು, ಆಗಸ್ಟ್,6,2025 (www.justkannada.in): ಹಾರೋಹಳ್ಳಿ ಸರ್ಕಾರಿ ಹಿರಿಯ ಶಾಲೆಯ ಕೊಠಡಿಗಳು ಹಾಳಾಗಿರುವುದನ್ನು ಗುರುತಿಸಿ ಮಿತ್ಸುಭಿಷಿ ಹೆವಿ ಇಂಡ್ರಸ್ಟ್ರಿಸ್ ಯು ಸಿಎಸ್‌ಆರ್ ನಿಧಿಯಿಂದ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಬಾರ ಶುಲ್ಕದಲ್ಲಿ ಹಾಗೂ ವಿವೇಕ ಶಾಲೆ ಯೋಜನೆಯಡಿ 6 ನೂತನ ಕೊಠಡಿಗಳನ್ನು ನಿರ್ಮಿಸಿ ಕೊಡಲಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರು ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಮತ್ತು ದಾಸೋಹ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಸ್ಥರು, ಪೋಷಕರ ಐದು ವರ್ಷಗಳ ಸತತ ಪ್ರಯತ್ನದಿಂದಾಗಿ ಇಂದು ನೆರವೇರಿದೆ. ಇತಿಹಾಸ ಇರುವ ಶಾಲೆಯು ಮುರಿದು ಬೀಳುವ ಆತಂಕವನ್ನು ಗ್ರಾಮಸ್ಥರು, ಪೋಷಕರು ವ್ಯಕ್ತಪಡಿಸಿ ಕೊಠಡಿಗಳನ್ನು ನಿರ್ಮಿಸುವಂತೆ ಒತ್ತಡ ಹೇರಿದ್ದರು. ಈಗ ಮಿತ್ಸುಭಿಷಿ ಹೆವಿ ಇಂಡ್ರಸ್ಟ್ರಿಸ್ ಯ ಸಿಎಸ್ ಆರ್‌ನಿಂದ ಹಾಗೂ ತಾ.ಪಂ. ಅಧಿಬಾರ ಶುಲ್ಕದಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಪ್ರೌಢಶಾಲೆಗೆ ಅಗತ್ಯವಿರುವ ಕೊಠಡಿಗಳನ್ನು ಕಟ್ಟಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ದಾಸೋಹ ಭವನವನ್ನು ಕಟ್ಟಿರುವುದರಿಂದ ಪೋಷಕರು ಸಂತಸಗೊಂಡಿದ್ದಾರೆ ಎಂದರು.
ಯಾವುದೇ ಕಾರ್ಯಕ್ರಮವಾದರೂ ಶಿಕ್ಷಕರು ಮಕ್ಕಳ ತಂದೆ ತಾಯಿಯನ್ನು ಕಡ್ಡಾಯವಾಗಿ ಕರೆತರಬೇಕು. ಶಾಲೆಯಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗಬೇಕು. ಮುಂದಿನ ದಿನಗಳಲ್ಲಿ ಶಾಲಾ ಶಿಕ್ಷಕರು ಪೋಷಕರನ್ನು ಒಂದು ಕಡೆಗೆ ಸೇರಿಸಿ ಶಾಲೆ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಎಂದರು.
ಹಾರೋಹಳ್ಳಿ ಶಾಲೆಗೆ ಎಸ್‌ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಮುಂದಿನ ವರ್ಷದಿಂದ ಗ್ರಾಮದ ಏಳು ಮತ್ತು ಹತ್ತನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ ಮೂರು ಬಹುಮಾನವನ್ನು ಸ್ವಂತ ಹಣದಿಂದ ಪ್ರಶಸ್ತಿ, ಪ್ರೋತ್ಸಾಹಧನ ನೀಡಲಾಗುವುದು ಎಂದು ಪ್ರಕಟಿಸಿದರು. ಮಕ್ಕಳು ಚೆನ್ನಾಗಿ ಓದಬೇಕು. ಶಿಕ್ಷಣವೇ ದೊಡ್ಡ ಆಸ್ತಿಯಾಗಿದೆ. ಏನೇ ಸಂಪಾದನೆ ಮಾಡಿದರೂ ಶಿಕ್ಷಣ ಎಂಬುದು ಇಲ್ಲದಿದ್ದರೆ ಜೀವನ ನಡೆಸಲು ಕಷ್ಟವಾಗಲಿದೆ ಎಂಬುದನ್ನು ಅರಿಯಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಮನೆಯಲ್ಲಿ ತಾಯಿ ಮೊದಲ ದೇವರು, ತಾಯಿಯ ಮೊದಲ ಗುರುವಾಗಿದ್ದಾರೆ. ಮಕ್ಕಳು ಸುಳ್ಳು ಹೇಳಬಾರದು. ಸತ್ಯವನ್ನು ಹೇಳಬೇಕು. ವರ ಮಹಾಲಕ್ಷ್ಮೀ ಹಬ್ಬದ ದಿನದಿಂದಾರೂ ತಪ್ಪದೆ ತಾಯಿಗೆ ನಮಸ್ಕರಿಸಬೇಕು. ಶಾಲೆಗೆ ಬಂದಾಗ ಗುರುವಂದನೆ ಮಾಡಬೇಕು. ಗ್ರಾಮೀಣ ಪ್ರದೇಶದ ಶಾಲೆಗಳು ಅಭಿವೃದ್ಧಿ ಹೊಂದಬೇಕು. ಹಾರೋಹಳ್ಳಿ ಗ್ರಾಮದ ಶಾಲೆಯ ಕೀರ್ತಿ ತರಬೇಕು. ವಿಶ್ವ ವಿಖ್ಯಾತ ದಸರಾ ಮಹೋತ್ಸವ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನವನ್ನು ಗೆಲ್ಲಬೇಕು ಎಂದರು.
ಮುಖಂಡರಾದ ಅರ್ಜುನ್, ಕೀರ್ತಿ ಕುವಾರ್, ಕಾರ್ತಿಕ್, ಸಂಜೀವ್, ರಜನಿಕಾಂತ್, ಪದ್ಮಕುವಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಗಿರೀಶ್, ರವಿನಂದನ್, ಕೃಷ್ಣ,ಮೂರ್ತಿ, ಮುಖ್ಯ ಶಿಕ್ಷಕ ಶಿವಣ್ಣ ಮತ್ತಿತರರು ಹಾಜರಿದ್ದರು.
Key words: MLA, G.T. Deve Gowda, inaugurated, government, school building, Dasoha Bhavan.