ಬೌದ್ಧ ಸಮುದಾಯಕ್ಕೆ ಅಲ್ಪಸಂಖ್ಯಾತರ ಆಯೋಗದಲ್ಲಿ ಪ್ರಾತಿನಿಧ್ಯ, ಕಾಲೇಜು -ಉನ್ನತ ಶಿಕ್ಷಣಕ್ಕೆ ನೆರವು – ಸಚಿವ ಜಮೀರ್ ಅಹಮದ್ ಭರವಸೆ.

ಬೆಂಗಳೂರು,ಜೂನ್,27,2023(www.justkannada.in):  ಬೌದ್ಧ ಸಮುದಾಯಕ್ಕೆ ಅಲ್ಪಸಂಖ್ಯಾತರ ಆಯೋಗದಲ್ಲಿ ಪ್ರಾತಿನಿದ್ಯ ಕಲ್ಪಿಸಲಾಗುವುದು. ಹುಣಸೂರಿನ ಬೈಲುಕುಪ್ಪೆಯಲ್ಲಿ ಸಮುದಾಯ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೆ ಕಾಲೇಜು ಹಾಗೂ ಉನ್ನತ ಶಿಕ್ಷಣ  ಪ್ರಾರಂಭಕ್ಕೆ ಅನುಮತಿ ದೊರಕಿಸಿಕೊಡಲಾಗುವುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಭರವಸೆ ನೀಡಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಮಂಗಳವಾರ ಬೌದ್ಧ ಗುರುಗಳ ನಿಯೋಗದಿಂದ ಮನವಿ ಸ್ವೀಕರಿಸಿದ   ಸಚಿವ ಜಮೀರ್ ಅಹ್ಮದ್ ಖಾನ್, ಸಮುದಾಯದ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ ಹಾಗೂ ಚುನಾವಣಾ ಗುರುತಿನ ಚೀಟಿ ಪಡೆಯಲು ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಮೈಸೂರಿನ ಮೂಡಾದಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ನಿವೇಶನಕ್ಕಾಗಿ ಮನವಿ ಸಲ್ಲಿಸಿರುವ ಹಾಗೂ ದಲೈ ಲಾಮಾ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೋದ್ದಿ ತಾಶಿ ಲುಮ್ಪೋ ಸಾಂಸ್ಕೃತಿಕ ಸೊಸೈಟಿಗೆ ಅನುದಾನ ನೀಡಲು ನಿಯೋಗ ಮನವಿ ಮಾಡಿತು. 500 ಬೌದ್ಧ ಗುರುಗಳು ಈ ಸೊಸೈಟಿಯಲ್ಲಿ ಇದ್ದು ಬಿಹಾರದ ಬೋದ್ ಗಯಾ ಕೇಂದ್ರದ ಜತೆಗೂಡಿ ಕೆಲಸ ಮಾಡುತ್ತಿದೆ ಎಂದು ತಿಳಿಸಿತು. ಇದಕ್ಕೆ ಸ್ಪಂದಿಸಿದ ಸಚಿವ ಜಮೀರ್ ತಕ್ಷಣ ಅನುದಾನ ನೀಡುವ ಭರವಸೆ ನೀಡಿದರು.

ಆಸ್ಪಸಂಖ್ಯಾತ ಆಯೋಗ, ನಿರ್ದೇಶನಾಲಯ, ಅಭಿವೃದ್ಧಿ ನಿಗಮ ಹೀಗೆ ಎಲ್ಲ ಕಡೆ ಸಮುದಾಯಕ್ಕೆ ಪ್ರಾತಿನಿದ್ಯ ಕಲ್ಪಿಸಿದರೆ ನಿಮ್ಮ ಸಮುದಾಯದ ಸಮಸ್ಯೆ ಪರಿಹಾರಕ್ಕೆ ಅನುಕೂಲವಾಗುತ್ತದೆ. ಆ ಬಗ್ಗೆ ಗಮನ ಹರಿಸಲಾಗುವುದು. ಒಂದು ವರ್ಷದಲ್ಲಿ ನಿಮ್ಮೆಲ್ಲ ಬೇಡಿಕೆ ಈಡೇರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ದಕ್ಷಿಣ ಭಾರತದ ಸೆಂಟ್ರಲ್ ಟಿಬೇಟಿಯನ್ ಅಡ್ಮಿನ್ಸ್ಟ್ರೇಷನ್  ವಿಭಾಗದ ಪ್ರತಿನಿಧಿಗಳು ನಿಯೋಗದಲ್ಲಿದ್ದರು.

ಇದೇ ಸಂದರ್ಭದಲ್ಲಿ ನಿಯೋಗ ಸಚಿವರಿಗೆ ಟಿಬೇಟಿಯನ್ ಸಾಂಪ್ರದಾಯಿಕ ಗೌರವ ನೀಡಿ ಸನ್ಮಾನಿಸಿತು. ಬೆಂಗಳೂರಿನ ಗಾಂಧಿ ನಗರದಲ್ಲಿರುವ ಮಹಾಬೋಧಿ ಸೊಸೈಟಿಗೆ ಭೇಟಿ ನೀಡುವಂತೆ ಸಚಿವರಿಗೆ ಆಹ್ವಾನ ನೀಡಿತು.

Key words: Minorities -Commission – Buddhist- community-Minister -Zameer Ahmed