ಸರಳ ದಸರಾ ಯಶಸ್ವಿಗೆ ಸಚಿವ ಎಸ್.ಟಿ ಸೋಮಶೇಖರ್ ಅಭಿನಂದನೆ: ದಸರಾ ಪ್ರಾಧಿಕಾರ ರಚನೆಗೆ ಶಾಸಕ ಜಿಟಿಡಿ ಆಗ್ರಹ.

ಮೈಸೂರು,ಅಕ್ಟೋಬರ್,16,2021(www.justkannada.in):  ಈ ಬಾರಿಯ ದಸರಾ ಮಹೋತ್ಸವ ಯಶಸ್ವಿಯಾಗಿದೆ. ದಸರಾ ದೀಪಾಲಂಕಾರ ಮತ್ತು ಉತ್ಸವ ಮೂರ್ತಿಯನ್ನು ಮೆರವಣಿಗೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನುಡಿದರು.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ವಹಿಸಿದರು. ಆ ಬಳಿಕ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರು ಕೂಡ ಮೈಸೂರು ಜಿಲ್ಲಾ ಉಸ್ತುವಾರಿ ಕೊಟ್ಟರು. ಎರಡು ಬಾರಿಯೂ ನಡೆದ ಸರಳ ದಸರಾವನ್ನು ಯಶಸ್ವಿಯಾಗಿ ನಡೆಸಿದ್ದೇನೆ. ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಜಿಲ್ಲಾಡಳಿತಕ್ಕೆ ಧಕ್ಕೆ ಆಗಬಾರದು, ಜನರಿಗೂ ತೊಂದರೆ ಅಗಬಾರದೆಂಬ ನಿಟ್ಟಿನಲ್ಲಿ ಕೋವಿಡ್ ಮಾರ್ಗಸೂಚಿ ಅನ್ವಯ ದಸರಾ ಮಾಡಿದ್ದೇವೆ. ಇದಕ್ಕೆ ಕಾರಣಕರ್ತರಾಗಿರುವ ಜಿಲ್ಲಾಧಿಕಾರಿಗೆ ಅಭಿನಂದನೆಗಳು. ಸೂಕ್ತ ಭದ್ರತೆ ಕೈಗೊಂಡ ಪೊಲೀಸ್ ಅಧಿಕಾರಿಗಳಿಗೂ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದದ್ದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಮುಂಬರುವ ದಸರಾಗಳಲ್ಲೂ ಇದು ಮುಂದುವರಿಯಲಿದೆ. ದಸರಾ ವಿದ್ಯುತ್ ದೀಪಾಲಂಕಾರ ವಿಸ್ತರಣೆ ಮಾಡಲಾಗಿದೆ. ಒಂಬತ್ತು ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ ಮಾಡಲಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಮೈಸೂರು ದಸರಾ ಪ್ರಾಧಿಕಾರ ರಚನೆ ಆಗಬೇಕು..

ಇದೇ ವೇಳೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಮೈಸೂರು ದಸರಾ ಪ್ರಾಧಿಕಾರ ರಚನೆ ಆಗಬೇಕು. ಇದು ಹಲವು ವರ್ಷಗಳ ಬೇಡಿಕೆಯಾಗಿದೆ. ಮುಂದಿನ ದಸರಾದೊಳಗೆ ಪ್ರಾಧಿಕಾರ ರಚನೆ ಆಗಬೇಕು ಎಂದು ಆಗ್ರಹಿಸಿದರು.

ಸಚಿವ ಸೋಮಶೇಖರ್ ಒಳ್ಳೆಯ ಕಲಾವಿದ ಎಂಬುದು ಕೂಡ ಈ ಬಾರಿಯ ದಸರಾದಲ್ಲಿ ಸಾಬೀತಾಯಿತು. ಸಚಿವ ಸೋಮಶೇಖರ್ ಕಲಾವಿದರ ಜೊತೆ ಬೆರೆತು ಹೆಜ್ಜೆ ಹಾಕಿದ್ದೇ ಇದಕ್ಕೆ ಸಾಕ್ಷಿ. ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಮಾಡಿದ್ದು ಒಳ್ಳೆಯ ನಿರ್ಧಾರ ಎಂದು ಶಾಸಕ ಜಿ ಟಿ ದೇವೇಗೌಡ  ಶ್ಲಾಘಿಸಿದರು.

ಇದೇ ವೇಳೆ ಮಾತನಾಡಿದ ಮೈಸೂರು ಡಿಸಿ ಬಗಾದಿ ಗೌತಮ್, ಚಾಮುಂಡೇಶ್ವರಿ ದಯೆಯಿಂದ ದಸರಾ ಸುಸೂತ್ರವಾಗಿ ನೆರವೇರಿದೆ.ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕಳೆದ ಸಂಜೆ 5ರಿಂದ 5:30ರ ನಡುವೆ ಮಳೆ ಬರಬೇಕಿತ್ತು. ಆದರೆ ಆ ಸಮಯದಲ್ಲಿ ಮಳೆ ಬರಲಿಲ್ಲ. ಮೆರವಣಿಗೆ ಮುಗಿದ ನಂತರ ಮಳೆ ಬಂತು.ಇದು ಶುಭ ಸಂಕೇತವಾಗಿದೆ ಎಂದರು.

ಹಾಗೆಯೇ ಮೈಸೂರು ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಮಾತನಾಡಿ, ಮೈಸೂರು ದಸರಾ ಒಂದು ತಿಂಗಳಿಗೆ ಸೀಮಿತವಾಗುತ್ತಿದೆ. ಮೈಸೂರು ದಸರಾ ಸಂಬಂಧ ವರ್ಷದ ಎಲ್ಲಾ ದಿನಗಳಲ್ಲೂ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಆ ರೀತಿಯಾದರೆ ಮೈಸೂರಿನ ಪ್ರವಾಸೋದ್ಯಮ ಬೆಳವಣಿಗೆ ಆಗುತ್ತದೆ. ಇದಕ್ಕೆ ಅಗತ್ಯ ಭದ್ರತೆ ನೀಡಲು ಪೊಲೀಸ್ ಇಲಾಖೆ ಸಿದ್ದವಾಗಿದೆ ಎಂದು ಹೇಳಿದರು.

Key words: Minister -ST Somashekhar — success – Dasar- MLA- GT Devegowda