ಉಗ್ರರ ದಾಳಿ: ಜಮ್ಮು ಕಾಶ್ಮೀರಕ್ಕೆ ತೆರಳಿ ಕನ್ನಡಿಗರಿಗೆ ನೆರವಾದ ಸಚಿವ ಸಂತೋಷ್‌ ಲಾಡ್‌

ಪಹಲ್ಗಾಂಮ್‌,ಏಪ್ರಿಲ್, 23,2025 (www.justkannada.in):  ಉಗ್ರರ ದಾಳಿಯಲ್ಲಿ ಮೃತಪಟ್ಟಿರುವವರ ಗುರುತು ಪತ್ತೆಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಮೃತರ ಸಂಬಂಧಿಕರಿಗೆ ನೆರವು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಲಾಡ್‌ ಅವರು ಕಾಶ್ಮೀರದಲ್ಲಿ ತೊಂದರೆಗೊಳಗಾದ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ್ದಾರೆ. ಪಹಲ್ಗಾಮ್‌ನಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಮೃತರ ಸಂಬಂಧಿಕರೊಂದಿಗೆ ಪಾರ್ಥಿವ ಶರೀರಗಳನ್ನು ಗುರುತಿಸಲು ನೆರವಾಗಿದ್ದಾರೆ.

ಮೃತದೇಹಗಳು ನಿಮ್ಮ ಸಂಬಂಧಿಕರೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ನೀವು ಎಷ್ಟು ಜನ ಬಂದಿದ್ದೀರಿ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಯಾವ ಮೃತದೇಹಗಳನ್ನು ಈಗಾಗಲೇ ನೋಡಲಾಗಿದೆ ಎಂಬುದನ್ನೂ ಸಹ ಅವರು ತಪಾಸಣೆ ಮಾಡುತ್ತಿದ್ದಾರೆ.

ಮೃತದೇಹಗಳನ್ನು ಇರಿಸಲಾಗಿರುವ ಪೆಟ್ಟಿಗೆಗಳ ಮೇಲೆ ದೂರವಾಣಿ ಕರೆಗಳನ್ನು ನಮೂದಿಸಲಾಗಿದ್ದು, ಸಂಬಂಧಿಕರಿಗೆ ಕರೆ ಮಾಡಿ ಸ್ವತಃ ಸಂತೋಷ್‌ ಲಾಡ್‌ ಅವರೇ ತಿಳಿಸುತ್ತಿದ್ದಾರೆ.

“ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ತೊಂದರೆಗೊಳಗಾದವರಿಗೆ ಅಗತ್ಯ ನೆರವನ್ನು ಮಾಡಲಾಗುವುದು. ನಮ್ಮ ಸರ್ಕಾರ ಏಲ್ಲಾ ರೀತಿಯಲ್ಲಿ ಸಹಾಯ ಮಾಡಲಿದೆ” ಎಂದು ಲಾಡ್‌ ಅವರು ತಿಳಿಸಿದ್ದಾರೆ.

ಇಬ್ಬರ ಗುರುತು ಪತ್ತೆ

ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗ ಮತ್ತು ರಾಣೇಬೆನ್ನೂರಿನ ಇಬ್ಬರು ಪ್ರವಾಸಿಗರ ಗುರುತು ಪತ್ತೆಯಾಗಿದ್ದು, ಇನ್ನೂ ಒಬ್ಬರ ಗುರುತು ಸಿಗಬೇಕಿದೆ.

ಸಚಿವ ಸಂತೋಷ್ ಲಾಡ್‌ ಅವರಿಗೆ ಧನ್ಯವಾದ ಹೇಳಿದ ಪ್ರವಾಸಿಗರು

ಪಹಲ್ಗಾಮ್‌ ನಲ್ಲಿ ನಡೆದ ದಾಳಿಯಲ್ಲಿ ತೊಂದರೆಗೊಳಗಾಗಿರುವ ಕನ್ನಡಿಗ ಪ್ರವಾಸಿಗರು ಸಚಿವ ಸಂತೋಷ್‌ ಲಾಡ್‌ ಅವರ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ.

“ಸಚಿವ ಲಾಡ್‌ ಅವರಿಗೆ ಬೆಳಗ್ಗೆ ಕರೆ ಮಾಡಿದ್ದೆ. ಅವರು ಹತ್ತು ನಿಮಿಷದಲ್ಲಿ ಬರುತ್ತೇನೆ ಎಂದಿದ್ದರು. ಅವರು ಹೇಳಿದಂತೆ  ತಮ್ಮ ತಂಡದೊಂದಿಗೆ ಇಲ್ಲಿಗೆ ಬಂದರು. ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಂಡರು. ಲಾಡ್‌ ಅವರು ಹಾಗೂ ಕರ್ನಾಟಕ ಸರ್ಕಾರ ಸದಾ ನಮ್ಮೊಂದಿಗೆ ಇದೆ. ಲಾಡ್‌ ಅವರಿಗೆ ಧನ್ಯವಾದಗಳು” ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ.

ಸಂತ್ರಸ್ತರಾಗಿರುವ ಕನ್ನಡಿಗ ಪ್ರವಾಸಿಗರಿಗೆ ಲಾಡ್‌ ಅವರು ಧೈರ್ಯ ಹೇಳಿ ಅವರ ಯೋಗಕ್ಷೇಮವನ್ನೂ ವಿಚಾರಿಸಿದರು.

ಸಚಿವ ಲಾಡ್ ಅವರು ನಿನ್ನೆ ರಾತ್ರಿ ಹುಬ್ಬಳ್ಳಿಯಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿ ದೆಹಲಿ ಬಳಿಕ ಅಲ್ಲಿಂದ ಅವರು ಕಾಶ್ಮೀರಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಕಾಶ್ಮೀರದ ಘಟನೆಯಲ್ಲಿ ಕರ್ನಾಟಕದ ಕೆಲವು ಕನ್ನಡಿಗರು ಸಿಕ್ಕಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ, ಕನ್ನಡಿಗರ ಸುರಕ್ಷತೆ ಮತ್ತು ರಕ್ಷಣೆಗೆ ಕ್ರಮ ಕೈಗೊಳ್ಳಲು ಲಾಡ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

ಕಾಶ್ಮೀರದ ದಾಳಿಗೆ ಸಿಲುಕಿದ ಕನ್ನಡಿಗರು

ದಕ್ಷಿಣ ಕಾಶ್ಮೀರದ ಪ್ರಮುಖ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಏಕಾಏಕಿ ನಡೆಸಿರುವ ದಾಳಿಯಲ್ಲಿ ಇಬ್ಬರು ವಿದೇಶಿಗರು ಸೇರಿದಂತೆ ಸುಮಾರು 26 ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಶಿವಮೊಗ್ಗ ಹಾವೇರಿ ಮೂಲದ ಇಬ್ಬರು ಪ್ರವಾಸಿಗರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ ಕೆಲವು ಕನ್ನಡಿಗರು ಸಿಕ್ಕಿರುವ ಬಗ್ಗೆ ಆರಂಭಿಕ ಮಾಹಿತಿ ಲಭ್ಯವಾಗಿದ್ದು, ಈ ಕಾರಣಕ್ಕಾಗಿ ಕರ್ನಾಟಕ ಸರ್ಕಾರವು ತಕ್ಷಣ ಕ್ರಮ ಕೈಗೊಂಡಿದೆ.

ಸಚಿವ ಸಂತೋಷ್ ಲಾಡ್ ಅವರು ಕಾಶ್ಮೀರಕ್ಕೆ ತೆರಳಿ, ಸ್ಥಳೀಯ ಆಡಳಿತ, ಭದ್ರತಾ ಪಡೆಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿರುವರು. ಕನ್ನಡಿಗರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ, ಸುರಕ್ಷಿತ ಸ್ಥಳಾಂತರ ಮತ್ತು ಇತರ ಸಹಾಯವನ್ನು ಒದಗಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರದ ಕ್ರಮ

ಕರ್ನಾಟಕ ಸರ್ಕಾರವು ಕಾಶ್ಮೀರದಲ್ಲಿ ಸಿಕ್ಕಿರುವ ಕನ್ನಡಿಗರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಸೂಕ್ತ ಮಾಹಿತಿ ಮತ್ತು ಭರವಸೆ ನೀಡುತ್ತಿದೆ. ರಾಜ್ಯದಲ್ಲಿ 24/7 ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಕಾಶ್ಮೀರದ ಘಟನೆಯಿಂದ ಪ್ರಭಾವಿತರಾದ ಕುಟುಂಬಗಳು ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸರ್ಕಾರ ತಿಳಿಸಿದೆ.

Key words: Terrorist attack, tourists, Minister, Santosh Lad, helps, Kannadigas