ಋತುಚಕ್ರದ ರಜೆ: ಸಮಿತಿಯೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚಿಸಿದ ಸಚಿವ ಸಂತೋಷ್ ಲಾಡ್

ಬೆಂಗಳೂರು, ಅಕ್ಟೋಬರ್, 11,2025 (www.justkannada.in): ರಾಜ್ಯದಲ್ಲಿನ ಎಲ್ಲಾ ವರ್ಗದ ಮಹಿಳಾ ಕಾರ್ಮಿಕರಿಗೆ ಮುಟ್ಟಿನ ರಜೆ ಬಗ್ಗೆ ಶಿಫಾರಸ್ಸು ಮಾಡುವುದಕ್ಕಾಗಿ ಡಾ: ಸಪ್ನ ಎಸ್. ಅಸೋಸಿಯೋಟ್ ಡೀನ್, ಕ್ರೈಸ್ಟ್ ಯೂನಿವರ್ಸಿಟಿ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯ ಸದಸ್ಯರುಗಳೊಂದಿಗೆ ಕಾರ್ಮಿಕ ಸಚಿವ  ಸಂತೋಷ್ ಎಸ್. ಲಾಡ್ ತಮ್ಮ ಗೃಹ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿ ಚರ್ಚಿಸಿದರು.

ಈ ವೇಳೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಕರ್ನಾಟಕ ಕಾನೂನು ಆಯೋಗವು ಜನವರಿ 23, 2025 ರಂದು ತನ್ನ 62ನೇ ವರದಿಯಲ್ಲಿ ಕರ್ನಾಟಕ ಮುಟ್ಟಿನ ರಜೆ ಮತ್ತು ನೈರ್ಮಲ್ಯ ಮಸೂದೆ, 2025 ರ ಕರಡು ಮಸೂದೆಯನ್ನು ರಚಿಸಿತು. ಅದರಂತೆ ಮಸೂದೆಯು ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮಾಡಲು ಹುಡುಗಿಯರಿಗೆ 2 ದಿನಗಳ ಮುಟ್ಟಿನ ರಜೆ ಮತ್ತು ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯನ್ನು ಶಿಫಾರಸು ಮಾಡಿದ್ದು, ಇದಕ್ಕೆ ಸಚಿವ ಸಂಪುಟದಿಂದ ಅನುಮೋದನೆ ಕೇಳಲಾಗಿದೆ. ವಿವಿಧ ಕಾರ್ಮಿಕ ಸಂಘಗಳು, ಉದ್ಯೋಗದಾತರು ಮುಂತಾದ ಪಾಲುದಾರರಿಂದ ಸಲಹೆಗಳು, ಅಭಿಪ್ರಾಯಗಳು ಮತ್ತು ಆಕ್ಷೇಪಣೆಗಳನ್ನು ಕೇಳಲಾಗಿದೆ ಎಂದು ತಿಳಿಸಿದ್ದಾರೆ.

ವಿವಿಧ ಕಾರ್ಮಿಕ ಸಂಘಗಳು, ಉದ್ಯೋಗದಾತರು, ಉದ್ಯೋಗಿಗಳು, ಉದ್ಯೋಗದಾತ ಸಂಘಟನೆ, ಎನ್‌ಜಿಒಗಳು ಮತ್ತು ಇತರ ಪಾಲುದಾರರಿಂದ ಸಲಹೆಗಳು. ಅಭಿಪ್ರಾಯಗಳು ಮತ್ತು ಆಕ್ಷೇಪಣೆಗಳನ್ನು ಕರೆಯಲಾಗಿದ್ದು,  75 ಅಭಿಪ್ರಾಯಗಳಲ್ಲಿ 56 ಅಭಿಪ್ರಾಯಗಳು ಮುಟ್ಟಿನ ರಜೆಯನ್ನು ಬೆಂಬಲಿಸಿವೆ. ಉಳಿದ 19 ಅಭಿಪ್ರಾಯಗಳು ಮಹಿಳೆಯರಿಗೆ ಮುಟ್ಟಿನ ರಜೆಯನ್ನು ವಿರೋಧಿಸಿದೆ. ಮುಟ್ಟಿನ ರಜೆಯ ಬದಲಿಗೆ 12 ರಜೆಗಳನ್ನು ಮಂಜೂರು ಮಾಡಬಹುದು ಎಂಬುದು ಹೆಚ್ಚಿನ ಪಾಲುದಾರರ ಅಭಿಪ್ರಾಯವಾಗಿದೆ.

ರಾಜ್ಯದ ಮಹಿಳಾ ಕಾರ್ಮಿಕರ ಹಿತದೃಷ್ಟಿಯನ್ನು ಪರಿಗಣಿಸಿ ಮಹಿಳೆಯರಿಗೆ ಮುಟ್ಟಿನ ರಜೆ ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಮತ್ತು ಸಂಸದೀಯ ಇಲಾಖೆ ಸಮ್ಮತಿಸಿದೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಣಕಾಸು ಇಲಾಖೆ ಒಪ್ಪಲಿಲ್ಲವಾದ್ದರಿಂದ ಡಿಪಿಆರ್  ಕಾರ್ಮಿಕ ಇಲಾಖೆಗೆ ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಲು ಸಲಹೆ ನೀಡಿದೆ.

ಸಮಿತಿಯು ವರ್ಷಕ್ಕೆ 6 ದಿನಗಳ ಮುಟ್ಟಿನ ರಜೆಯನ್ನು ಶಿಫಾರಸು ಮಾಡಿತು.ಅವರು ಅಗತ್ಯವಿದ್ದಾಗ ಮತ್ತು ಯಾವಾಗ ಬೇಕಾದರೂ ಪಡೆಯಬಹುದು. ಮುಟ್ಟಿನ ರಜೆಯನ್ನು ಪರಿಗಣಿಸುವಾಗ ಯಾವುದೇ ನೀತಿಗಳು ಮಹಿಳೆಯರ ವಿರುದ್ಧ ತಾರತಮ್ಯ ಮಾಡದಂತೆ ನೋಡಿಕೊಳ್ಳುವ ಬದಲು ಅವರಿಗೆ ಸಮಾನ ಅವಕಾಶಗಳು ಮತ್ತು ರಕ್ಷಣೆಯನ್ನು ಒದಗಿಸುವಲ್ಲಿ ಪ್ರಸ್ತುತವಾಗುತ್ತದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

ಕಾರ್ಖಾನೆಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಕಂಪನಿಗಳು ಮತ್ತು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮುಟ್ಟಿನ ರಜೆ ಪಡೆಯುವುದು ಮಹಿಳೆಯರ ಮೂಲಭೂತ ಹಕ್ಕಾಗಿದ್ದರೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ರಾಷ್ಟ್ರೀಯ ಶಾಸನವಿಲ್ಲ. ದೇಶದಲ್ಲಿ  ಹಲವು ರಾಜ್ಯಗಳು ಮತ್ತು ಸಂಸ್ಥೆಗಳು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ನೀಡುತ್ತಿವೆ. ವಿವಿಧ ರಾಜ್ಯಗಳಲ್ಲಿ ಈ ಮುಟ್ಟಿನ ರಜೆಗೆ ತಮ್ಮದೇ ಆದ ನೀತಿ ನಿಯಮಗಳನ್ನು ಮಾಡಿಕೊಂಡಿವೆ.

ಆ ಬಗ್ಗೆ ನೋಡುವುದಾದರೆ 1992ರಲ್ಲಿ ಬಿಹಾರ ರಾಜ್ಯದಲ್ಲಿ ಮಹಿಳೆಯರಿಗೆ ತಿಂಗಳಿಗೆ 2ದಿನಗಳ ರಜೆ, 2023ರಲ್ಲಿ ಕೇರಳ  ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರಿಗೆ ಹಾಜರಾತಿ ಸಹಿತ 2ದಿನಗಳ ರಜೆ, ಇನ್ನೂ ಮಹಾರಾಷ್ಟ್ರದಲ್ಲಿ ನೀತಿಯಾಗಿದ್ದರೂ ಅದು ಅನುಷ್ಠಾನಗೊಂಡಿಲ್ಲ. ಜೋಮ್ಯಾಟೋ  2020ರಲ್ಲಿ  ಜಾರಿಗೋಳಿಸಿರುವ ಪ್ರಕಾರ ಮಹಿಳಾ ಉದ್ಯೋಗಿಗಳು ಪ್ರತಿ ವರ್ಷ 10 ದಿನಗಳ ರಜೆಗೆ ಅರ್ಹರಾಗಿದ್ದಾರೆ. ಸ್ವಿಗ್ಗಿ ತಿಂಗಳಿಗೆ 2 ದಿನಗಳ ರಜೆ ನೀಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಡೋ ದಾದ್ರೆ, ಸ್ಪೇನ್ ದೇಶ ಸ್ತ್ರೀಯರಿಗೆ ತಿಂಗಳಿಗೆ 3 ದಿನಗಳ ರಜೆ ಇರುತ್ತದೆ . ಜಪಾನ್  ಮುಟ್ಟಿನ ಸಮಯದಲ್ಲಿ ಕೆಲಸ ಮಾಡಲು ಒತ್ತಾಯಿಸಬೇಡಿ ಎಂದಿದೆ. ಇಂಡೋನೇಷ್ಯಾ ತಿಂಗಳಿಗೆ 2 ದಿನಗಳು. ದಕ್ಷಿಣ ಕೊರಿಯಾ  ತಿಂಗಳಿಗೆ 2 ದಿನ ದೈಹಿಕ ರಜೆ,  ವಿಯೆಟ್ನಾಮ್ ಮುಟ್ಟಿನ ಸಮಯದಲ್ಲಿ 30 ನಿಮಿಷಗಳ ವಿರಾಮ. ಜಾಮ್ಬಿಯರ್ 1 ದಿನ ರಜೆ ನೀಡಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಮಿತಿಯ ಸದಸ್ಯರಾದ   ಪ್ರತಿಭಾ, ಜಯಮ್ಮ  ಕಾತ್ಯಾಯಿನಿ ಚಮ್ರಂ, ಶ್ಯಾಮಲಾ,  ಮೀನಾ ಪಾಟೀಲ್, ರುತ್ ಮನೋರಮಾ, ಡಾ. ಮಂಜುಳಾ, ಪ್ರೊಫೆಸರ್,  ಡಾ. ಸುನಿತಾ, ಶ್ರುತಿ, ರವಿಕುಮಾರ್, ಅನುರಾಧ, ಉಮೇಶ್ ಮತ್ತಿತ್ತರರು ಉಪಸ್ಥಿತರಿದ್ದರು.

Key words: Menstrual leave, Minister, Santosh Lad, meeting