ಬೌದ್ಧ ಬಿಕ್ಕುಗಳಿಗೆ ಶೀಘ್ರದಲ್ಲಿ ಮಾಸಿಕ ಸಂಭಾವನೆ-ಸಚಿವ ರಾಮಲಿಂಗರೆಡ್ಡಿ

ಬೆಳಗಾವಿ,ಡಿಸೆಂಬರ್,17,2025 (www.justkannada.in): ರಾಜ್ಯದಲ್ಲಿರುವ ಬುದ್ಧವಿಹಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೌದ್ಧ ಬಿಕ್ಕುಗಳಿಗೆ ಮಾಸಿಕ ಸಂಭಾವನೆಯನ್ನು ಶೀಘ್ರದಲ್ಲಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರ ಪರವಾಗಿ ಸಚಿವ ರಾಮಲಿಂಗರೆಡ್ಡಿ ಅವರು ಉತ್ತರಿಸಿದರು.

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯದ ನೋಂದಾಯಿತ ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಹಾಗೂ ರಾಜ್ಯದ ವಕ್ಫ್ ನೊಂದಾಯಿತ ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್ ಇಮಾಮ್ ಮತ್ತು ಮುಯೀಜ್ಜನ್ ಗಳಿಗೆ ಮಾಸಿಕ ಗೌರವಧನ ನೀಡಲಾಗುತ್ತಿದೆ. ಅದರಂತೆ ಬೌದ್ಧ ಬಿಕ್ಕುಗಳಿಗೂ ಪ್ರಾರಂಭಿಸಲಾಗುವುದು ಎಂದು ಘೋಷಣೆ ಮಾಡಿದರು.

ಈ ವೇಳೆ ಕೆ.ಶಿವಕುಮಾರ್ ಅವರು ಮಾತನಾಡಿ, ರಾಜ್ಯದಲ್ಲಿ 80ಕ್ಕೂ ಹೆಚ್ಚು ಬುದ್ಧವಿಹಾರಗಳಿದ್ದು, 200ಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳು ಸೇವೆ ಸಲ್ಲಿಸುತ್ತಿದ್ದಾರೆ. ದಾನಿಗಳ ನೆರವಿನಿಂದ ನಿರ್ಮಾಣ ಮಾಡಿರುವ ಬುದ್ಧವಿಹಾರಗಳ ನಿರ್ವಹಣೆ ಕಷ್ಟಕರವಾಗಿದೆ. ಸರ್ಕಾರದಿಂದ ಸಹಾಯಧನ ದೊರಕುತ್ತಿಲ್ಲ. ಈ ಹಿಂದೆ ಇದ್ದಂತಹ ಯಾವುದೇ ಸರ್ಕಾರಗಳು ಕೂಡ ಸಹಾಯಧನ ನೀಡಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಭಿಮಾನಿಗಳು ಸೇರಿದಂತೆ ಬೌದ್ಧಧರ್ಮವನ್ನು ಒಪ್ಪಿಕೊಂಡಿರುವ ಬಹಳಷ್ಟು ಅನುಯಾಯಿಗಳು ಸೇರಿ ಬುದ್ಧವಿಹಾರಗಳನ್ನು ನಿರ್ಮಿಸಿದ್ದಾರೆ. ಇವುಗಳನ್ನು ಸ್ಥಳೀಯ ಸಂಸ್ಥೆಗಳು ನಿರ್ವಹಣೆ ಮಾಡಬೇಕು. ಜೊತೆಗೆ ಬೌದ್ಧ ಬಿಕ್ಕುಗಳು ಹಾಗೂ ಅವರ ಸಹಾಯಕರಿಗೆ ಸರ್ಕಾರದಿಂದ ಸಹಾಯಧನ ನೀಡವುದರಿಂದ ಬುದ್ಧವಿಹಾರ ನಡೆಸಲು ಸಹಕಾರಿಯಾಗಲಿದೆ ಎಂದು ಒತ್ತಾಯಿಸಿದರು.

Key words: salary, Buddhist monks, Minister, Ramalingareddy, MLC K.Shivakumar