ಬೆಂಗಳೂರು,ಜನವರಿ,30,2026 (www.justkannada.in): ಸಾರಿಗೆ ಬಸ್ ಗಳನ್ನು ಒದಗಿಸಲು ಸರಕಾರ ವಿಫಲ, ಕಳೆದ 3 ವರ್ಷಗಳಿಂದ ನಮಗೆ ಬಸ್ ಗಳ ಕೊರತೆ ಮತ್ತು ಸಾರ್ವಜನಿಕರ ಸಾರಿಗೆಯ ಕೊರತೆ ಇದೆ ದಯವಿಟು ಖಾಸಗಿ ಬಸ್ ಗಳ ಸೇವೆಯನ್ನು ಒದಗಿಸಲು ಅನುಮತಿಸಿ ಎಂದು ಟ್ವೀಟ್ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ ಅವರಿಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸವಾಲು ಹಾಕಿದ್ದಾರೆ.
ಮೋಹನ್ ಪೈ ಅವರ ಟ್ವೀಟ್ ಗೆ ಟ್ವಿಟ್ ಮೂಲಕವೇ ತಿರುಗೇಟು ನೀಡಿರುವ ಸಚಿವ ರಾಮಲಿಂಗ ರೆಡ್ಡಿ, “ಕಳೆದ 2 ವರ್ಷಗಳಲ್ಲಿ, ನಾವು 5,800 ಹೊಸ ಬಸ್ ಗಳನ್ನು ಸೇರಿಸಿದ್ದೇವೆ. ಮಾರ್ಚ್ 2026 ರ ಹೊತ್ತಿಗೆ, ಇನ್ನೂ 2,000 ಬಸ್ ಗಳು ರಸ್ತೆಗಿಳಿಯುತ್ತವೆ. ಬಿಜೆಪಿ ಅಧಿಕಾರಾವಧಿಯಲ್ಲಿ (2019-2023), ಬಸ್ ಗಳ ಕೊರತೆಯಿದ್ದ ವೇಳೆ ನೀವು ಒಂದೇ ಒಂದು ಪ್ರಶ್ನೆಯನ್ನು ಏಕೆ ಎತ್ತಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಖಾಸಗಿ ಕಂಪನಿಗಳಿಗಿಂತ ಭಿನ್ನವಾಗಿ, ದೂರದ ಹಳ್ಳಿಗಳ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ನಾಗರಿಕರಿಗೆ ಬಸ್ ಸೇವೆ ಒದಗಿಸಲಾಗುತ್ತಿದೆ. 30% ಸರ್ಕಾರಿ ಬಸ್ ಮಾರ್ಗಗಳು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತವೆ, 30% ಬ್ರೇಕ್-ಈವನ್ ನಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ರಾಜ್ಯಾದ್ಯಂತ ಶೇ 98 ರಷ್ಟು ಹಳ್ಳಿಗಳು ಬಸ್ ಸಂಪರ್ಕವನ್ನು ಹೊಂದಿವೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 26,054 ಬಸ್ ಗಳು ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ ಮಾತ್ರ, ನಾವು ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತೇವೆ. 1,686 ಎಲೆಕ್ಟ್ರಿಕ್ ಬಸ್ಗಳು ಸೇರಿದಂತೆ 7,108 ಬಸ್ಗಳಿವೆ, ನಾವು ಪ್ರತಿದಿನ 13 ಲಕ್ಷ ಕಿ.ಮೀ. ಮತ್ತು 66,000 ಟ್ರಿಪ್ ಗಳನ್ನು ಕೊಡುತ್ತಿದ್ದೇವೆ, ಇದು ಭಾರತದಲ್ಲಿ ಅತಿ ಹೆಚ್ಚು. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಸೇರಿದಂತೆ ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಈ ಪ್ರಮಾಣ ಮತ್ತು ದಕ್ಷತೆಗೆ ಹೊಂದಿಕೆಯಾಗುವ ಒಂದೇ ಒಂದು ನಗರ ಅಥವಾ ರಾಜ್ಯವನ್ನು ನನಗೆ ತೋರಿಸಿ ಎಂದು ಸಚಿವ ರಾಮಲಿಂಗರೆಡ್ಡಿ ಸವಾಲೆಸೆದರು.
Key words: Minister, Ramalinga Reddy, challenges, Mohandas Pai







