ರಾಜಕಾರಣ ಫುಟ್ಬಾಲ್​ ಅಲ್ಲ, ಚೆಸ್​ ಗೇಮ್: ಕನಕಪುರದಲ್ಲಿ ಆರ್​.ಅಶೋಕ್ ​ಗೆ ಒಳ್ಳೆಯ ಊಟ ಹಾಕಿಸಿ ಆತಿಥ್ಯ ಕೊಟ್ಟು ಕಳಿಸೋಣ- ಡಿ.ಕೆ ಶಿವಕುಮಾರ್ ಟಾಂಗ್

ಬೆಂಗಳೂರು ,ಏಪ್ರಿಲ್,12,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ  ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್​.ಅಶೋಕ್ ಸ್ಪರ್ಧೆಗಿಳಿದಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್,  ರಾಜಕಾರಣ ಫುಟ್ಬಾಲ್​ ಅಲ್ಲ, ಚೆಸ್​ ಗೇಮ್. ಚೆಸ್​ ಆಡ್ತಿದ್ದಾರೆ ಆಡಲಿ, ನನಗೆ ಹೋರಾಟ ಹೊಸದೇನು ಅಲ್ಲ. ಇಡೀ ಜೀವನ ಹೋರಾಟ ಮಾಡಿಕೊಂಡು ಬಂದಿದ್ದೇನೆ.  ಆತಿಥ್ಯ ಕೊಡುವುದಕ್ಕೆ ಕನಕಪುರದವರು ಫೇಮಸ್. ಸಾಮ್ರಾಟನಾದರೂ ಬರಲಿ, ಚಕ್ರವರ್ತಿಯಾದರೂ ಬರಲಿ. ಕನಕಪುರದಲ್ಲಿ ಆರ್​.ಅಶೋಕ್​ಗೆ ಒಳ್ಳೆಯ ಆತಿಥ್ಯ ಕೊಡೋಣ. ಕನಕಪುರದಲ್ಲಿ ಮಿಲಿಟರಿ ಹೋಟೆಲ್​​ಗಳು ಬಹಳಷ್ಟಿವೆ. ಒಳ್ಳೆಯ ಊಟ ಹಾಕಿಸಿ ಆತಿಥ್ಯ ಕೊಟ್ಟು ಕಳಿಸೋಣ ಎಂದು ಸಚಿವ ಆರ್.ಅಶೋಕ್ ಗೆ ಟಾಂಗ್ ನೀಡಿದರು.

ಪದ್ಮನಾಭನಗರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಬೇಕು ಎಂಬ ಒತ್ತಡವಿದೆ. ಆದ್ರೆ ಪದ್ಮನಾಭನಗರ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್​ ಅಭ್ಯರ್ಥಿಯಾಗಿ ರಘುನಾಥ ನಾಯ್ಡು ಸ್ಪರ್ಧಿಸ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಇಲ್ಲ. ಈ ಬಾರಿ ಪದ್ಮನಾಭನಗರ ಕ್ಷೇತ್ರದಲ್ಲೂ ಆರ್. ಅಶೋಕ್ ಸೋಲನುಭವಿಸುತ್ತಾರೆ ಎಂದು ಭವಿಷ್ಯ ನುಡಿದರು.

ಹಾಗೆಯೇ  ಕಾಂಗ್ರೆಸ್​ ಮೂರನೇ ಪಟ್ಟಿಯಲ್ಲಿ ಆಶ್ಚರ್ಯಕರ ಹೆಸರು ಬರಲಿದೆ. ಟಿಕೆಟ್​ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಬಿರುಗಾಳಿ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಇಂದಿನಿಂದ ಹೊಸಗಾಳಿ ಪ್ರಾರಂಭವಾಗಿದೆ. ಬಿಜೆಪಿ ಪಟ್ಟಿ ಬಗ್ಗೆ ನಾನು ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ. ಇನ್ನಷ್ಟು ಬದಲಾವಣೆ ಆಗಲಿದೆ ನೋಡುತ್ತಿರಿ ಎಂದರು.

Key words: minister-R.Ashok –contest-Kanakapur – DK Shivakumar