ಪೊಲೀಸ್ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿ: 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ-ಗೃಹ ಸಚಿವ ಪರಮೇಶ್ವರ್

ಬೆಳಗಾವಿ,ಡಿಸೆಂಬರ್,11,2025 (www.justkannada.in): ಪೊಲೀಸ್ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿ ಇದೆ. ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ರಾಜ್ಯದಲ್ಲಿ ದರೋಡೆ ಸುಲಿಗೆ ಪ್ರಕರಣ ಕುರಿತು ವಿಧಾನ ಪರಿಷತ್ ನಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ  ಕಿಶೋರ್ ಕುಮಾರ್,  ಒಟ್ಟು ಪ್ರಕರಣಗಳ ಕುರಿತಾಗಿನ ಅಂಕಿ ಅಂಶ ನೋಡಿದರೆ ಹೆದರಿಕೆ ಆಗುತ್ತಿದೆ.  ನಮ್ಮ ರಾಜ್ಯ ಕಳ್ಳಕಾಕರ ಬೀಡಾಗುತ್ತಿದೆಯೇ ಎಂಬ ಆತಂಕ ಎದುರಾಗಿದೆ.  ಪೊಲೀಸರು ಕೂಡ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವ ಮೂಲಕ ಪೊಲೀಸ್ ಇಲಾಖೆ ದಕ್ಷತೆ ಬಗ್ಗೆ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಕಾನೂನು ಪಾಲನೆ ವಿಚಾರದಲ್ಲಿ ಪರಿಣಾಮಕಾರಿ ಕೆಲಸ ಆಗುತ್ತಿದೆ.  ತರಬೇತಿನಿರತ ಪೊಲೀಸರನ್ನೂ ಕೂಡ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಅವರಿಗೂ ಸೇವಾನುಭವ ಸಿಗಲಿ ಎಂದು ನಿಯೋಜನೆ  ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿ ಇವೆ. ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. 4 ವರ್ಷದಿಂದ ನೇಮಕಾತಿ ಆಗದಿರುವುದು ಸಮಸ್ಯೆ ಹೆಚ್ಚಾಗಲು ಕಾರಣ. ನಮ್ಮ ಸರ್ಕಾರ ಈಗ ನೇಮಕಾತಿ ಮಾಡಿಕೊಳ್ಳುತ್ತಿದೆ. ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು  ಪರಮೇಶ್ವರ್ ಉತ್ತರಿಸಿದರು.

Key words: 14 thousand posts, vacant, police department, Home Minister, Parameshwara