ರಸ್ತೆಗುಂಡಿ ವಿಚಾರ: ಐಟಿಯವರ ಸಮಸ್ಯೆ ಬಗೆಹರಿಸಿ ತಿಳಿ ಹೇಳುವ ಕೆಲಸ ಮಾಡ್ತೇವೆ- ಗೃಹ ಸಚಿವ ಪರಮೇಶ್ವರ್

ಮೈಸೂರು,ಅಕ್ಟೋಬರ್,15,2025 (www.justkannada.in):  ಬೆಂಗಳೂರು ರಸ್ತೆಗಳಲ್ಲಿ ಕಸ ಮತ್ತು ರಸ್ತೆ ಗುಂಡಿಗಳ ಬಗ್ಗೆ ಟೀಕೆ ಮತ್ತು ಐಟಿ ಕಂಪನಿಗಳು ಬೇರ  ಕಡೆಗೆ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್,  ಐಟಿ ಕಂಪನಿಗಳು ಬೇರೆ ಕಡೆಗೆ ಹೋಗುವುದಾಗಿದ್ದರೇ ಗ್ಲೋಬಲ್ ಇನ್ವೆಸ್ಟ್ರ್ ಮಿಟ್ ಮಾಡಿ 10 ಲಕ್ಷ ಕೋಟಿ ಹೂಡಿಕೆ ಮಾಡುವುದಕ್ಕೆ ಸಹಿ ಮಾಡುತ್ತಿರಲಿಲ್ಲ. ರಸ್ತೆ ಹಾಳಗಿದೆ ಎನ್ನುವ ಸಮಸ್ಯೆ ಇದ್ದರೆ ಇದನ್ನು ಸರಿ ಮಾಡುತ್ತೇವೆ. ಬೆಂಗಳೂರಿನ ಗುಂಡಿ ಮುಚ್ಚುವುದಕ್ಕೆ  ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಅದೇಶ ನೀಡಿದ್ದಾರೆ. ಐಟಿ ಅವರ ಸಮಸ್ಯೆ ಏನಿದೆ ಅದನ್ನು ಬಗೆಹರಿಸುತ್ತೇವೆ. ಅವರಿಗೆ  ತಿಳಿ ಹೇಳುವ ಕೆಲಸ ಮಾಡುತ್ತೇವೆ. ಕರ್ನಾಟಕಕ್ಕೆ ಯಾರೇ ಬಂದರೂ  ಅವರಿಗೆ ಬಂಡವಾಳ ಹೂಡುವುದಕ್ಕೆ ಅವರಿಗೆ ಬೇಕಾದ  ಸಹಾಯ ಮಾಡುತ್ತೇವೆ. ಗೂಗಲ್ ಅವರು ಅವರದ್ದೇ ಕಾರಣಕ್ಕೆ ಆಂಧ್ರಕ್ಕೆ ಹೋಗಿದ್ದಾರೆ ಕೇವಲ ರಸ್ತೆ ವಿಚಾರಕ್ಕೆ  ಅಲ್ಲಿಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ವಿಚಾರ: ಕಾನೂನು ಕ್ರಮ

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ಪ್ರಿಯಾಂಕ್  ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು ಪತ್ರ ಬರೆದಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವುದಕ್ಕೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಪೊಲೀಸರು ಬೆದರಿಕೆ ಕರೆ ಬಂದಿರುವ ನಂಬರ್ ಪರಿಶೀಲನೆ ಮಾಡುತ್ತಿದ್ದಾರೆ. ಬೆದರಿಕೆ ಹಾಕಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ದೇಶದ 450 ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈ ರೀತಿ ಬೆದರಿಕೆ ನೀಡುವವರ ಮನಸ್ಥಿತಿ ಹೇಗಿದೆ ಅಂತ ಪರಿಶೀಲನೆ ಮಾಡುವವರಿಗೆ ಗೊತ್ತಾಗುವುದಿಲ್ಲ ಎಂದರು

ಅರ್ ಎಸ್ ಎಸ್ ಬ್ಯಾನ್ ಗೆ  ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಇದರ ಬಗ್ಗೆ ಸರ್ಕಾರ ತೀರ್ಮಾನವನ್ನು ತೆಗೆದುಕೊಳ್ಳಬೇಕು ಅಲ್ಲಿಯವರೆಗೂ  ಏನು ಹೇಳುವುದಕ್ಕೆ ಅಗುವುದಿಲ್ಲ ಎಂದರು.

ಜೆ.ಡಿ.ಎಸ್ ಶಾಸಕರಿಗೆ ಅನುದಾನ ತಾರತಮ್ಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಎಲ್ಲರಿಗೂ ಅನುದಾನ ಕೊಡುತ್ತಿದ್ದೇವೆ. ಮುಖ್ಯಮಂತ್ರಿಗಳು ಎಲ್ಲರಿಗೂ 50 ಕೋಟಿ ರೂ. ಕೊಟ್ಟಿದ್ದಾರೆ. ವಿಪಕ್ಷದವರಿಗೂ 25 ಕೋಟಿ ರೂ.ಗಳನ್ನು ಅನುದಾನ ಕೊಟ್ಟಿದ್ದಾರೆ . ಬಿಜೆಪಿ ಅವರು ಈ ಹಿಂದೆ   ಏನು ಮಾಡಿದ್ರು ಅಂತ ಅವರು ನೆನಪು ಮಾಡಿಕೊಳ್ಳಲಿ. ಈ ಹಿಂದೆ ನಮಗೆ ಕೇವಲ 5 ಕೋಟಿ ಕೊಟ್ಟಿದ್ದರು. ಅದನ್ನು ಅವರು ಮರೆಯಬಾರದು. ಆದರೂ ನಾವು ಆ ರೀತಿ ಯಾರಿಗೂ  ತಾರತಮ್ಯ ಮಾಡುವುದಿಲ್ಲ‌ ಎಂದರು.

ನವೆಂಬರ್ ಕ್ರಾಂತಿಯ ಬಗ್ಗೆ ಬಿಜೆಪಿ ಅವರು ಜಪ ಮಾಡಲಿ. ಅವರು ಜಪ ಮಾಡುವುದನ್ನು ನಾವು ಬೇಡ ಎನ್ನಲ್ಲ ಎಂದು ಪರಮೇಶ್ವರ್ ವ್ಯಂಗ್ಯವಾಡಿದರು.

Key words: Road, pothole, issue: IT,workers, problems, Minister, Parameshwar