1,741.60 ಕೋಟಿ ಬಂಡವಾಳ ಹೂಡಿಕೆಯ 63 ಯೋಜನೆಗಳಿಗೆ ಅನುಮೋದನೆ

ಬೆಂಗಳೂರು,ಮೇ,28,2025 (www.justkannada.in):  ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ 153ನೇ ರಾಜ್ಯ ಮಟ್ಟದ   ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯು, ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಲ್ಲಿ ₹1,741.60 ಕೋಟಿ ಬಂಡವಾಳ ಹೂಡಿಕೆಯ ಒಟ್ಟು 63 ಯೋಜನೆಗಳಿಗೆ  ಅನುಮೋದನೆ ನೀಡಿದ್ದು, ಇದರಿಂದ 7,219 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.

ʼದಕ್ಷಿಣ ಕನ್ನಡ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅತ್ಯಾಧುನಿಕ ಫೀಡ್‌ ಪ್ಲ್ಯಾಂಟ್‌, ಪ್ರಿಫ್ಯಾಬ್ರಿಕೇಟೆಡ್‌ ಮ್ಯಾಡುಲರ್‌, ಬಸ್‌ ಬಾಡಿ ಬಿಲ್ಡಿಂಗ್‌, ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ಸ್‌ ಸಿಸ್ಟಮ್ಸ್‌ ಮತ್ತು ಬಿಡಿಭಾಗ ತಯಾರಿಕೆ ಸೇರಿದಂತೆ 60 ಯೋಜನೆಗಳು ಮತ್ತು  ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗಳು  ಒಳಗೊಂಡಂತೆ ಒಟ್ಟು 63  ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆʼ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ತಿಳಿಸಿದ್ದಾರೆ.

ʼಅನುಮೋದನೆ ಪಡೆದ ಯೋಜನೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರಿ ತಾಲ್ಲೂಕಿನಲ್ಲಿ ₹125.88 ಕೋಟಿ ವೆಚ್ಚದ ಅತ್ಯಾಧುನಿಕ  ಫೀಡ್‌ ಪ್ಲ್ಯಾಂಟ್‌,  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ  ₹97.52 ಕೋಟಿ ವೆಚ್ಚದ  ಪ್ರಿಫ್ಯಾಬ್ರಿಕೇಟೆಡ್‌ ಮಾಡ್ಯುಲರ್‌ ಪ್ರಾಡಕ್ಟ್ಟ್‌ ಘಟಕ, ತುಮಕೂರು ಜಿಲ್ಲೆಯ ಹಿರೇಹಳ್ಳಿಯಲ್ಲಿ  ₹91.2 ಕೋಟಿ ವೆಚ್ಚದ  ಟ್ರಾನ್ಸ್‌ ಫಾರ್ಮರ್‌ ರೇಡಿಯೇಟರ್‌ ತಯಾರಿಕಾ ಘಟಕ ಸ್ಥಾಪನೆ ಪ್ರಮುಖವಾಗಿವೆ.

₹50 ಕೋಟಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆಯ 7 ಪ್ರಮುಖ ಬೃಹತ್‌ ಹಾಗೂ ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ  593.80 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. 2,093 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.

₹15 ಕೋಟಿಗಳಿಂದ  ₹50 ಕೋಟಿ ಒಳಗಿನ 53 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ ₹1,106.6 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಲಿದೆ.  4,961 ಜನರಿಗೆ  ಉದ್ಯೋಗ ಅವಕಾಶಗಳು ದೊರೆಯಲಿವೆ.

ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗಳಿಂದ   41.20 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯಾಗಲಿದೆ.  165 ಜನರಿಗೆ ಉದ್ಯೋಗ ಅವಕಾಶ ದೊರೆಯಲಿವೆʼ ಎಂದು ಸಚಿವ ಎಂ.ಬಿ ಪಾಟೀಲ್ ವಿವರಿಸಿದ್ದಾರೆ.

ಸಭೆಯಲ್ಲಿ ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್‌, ಕೈಗಾರಿಕಾ ಇಲಾಖೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯ ಡಾ. ಎನ್‌. ಮಹೇಶ್‌, ಐಟಿಬಿಟಿ ಇಲಾಖೆಯ ನಿರ್ದೇಶಕ  ರಾಹುಲ್‌ ಎಸ್‌. ಸಂಕನೂರ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Approval, 63 projects, investment, Rs. 1,741.60 crore, Minister, MB Patil