ಸಿಮೆಂಟ್ಸ್‌ ಕಾರ್ಖಾನೆ : ರೈತರಿಂದ ನೇರ ಭೂಮಿ ಖರೀದಿ, ಹೆಚ್ಚುವರಿ ಪರಿಹಾರದ ಪ್ರಮೇಯವಿಲ್ಲ-ಸಚಿವ ಎಂ.ಬಿ ಪಾಟೀಲ್

 

ಬೆಂಗಳೂರು,ಆಗಸ್ಟ್,12,2025 (www.justkannada.in):  ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನಲ್ಲಿ ರಾಜಶ್ರೀ ಸಿಮೆಂಟ್ಸ್‌ ಕಂಪನಿಗೆ ಸಿಮೆಂಟ್‌ ಕಾರ್ಖಾನೆ ಸ್ಥಾಪನೆಗೆ 573 ಎಕರೆ ಮತ್ತು ಗಣಿಗಾರಿಕೆಗೆಂದು 398.23 ಎಕರೆ ಜಮೀನನ್ನು ರೈತರಿಂದ ನೇರವಾಗಿ ಖರೀದಿಸಲು 2010ರಲ್ಲೇ ಅನುಮೋದನೆ ನೀಡಲಾಗಿತ್ತು. ಹೀಗಾಗಿ, ಈಗ ಸಂತ್ರಸ್ತ ರೈತರಿಗೆ ಹೆಚ್ಚಿನ ಪರಿಹಾರ ಕೊಡಬೇಕೆಂದು ಆಗ್ರಹಿಸುವುದು ಸರಿಯಲ್ಲ ಮತ್ತು ಇದರಲ್ಲಿ ಸರಕಾರದ ಪಾತ್ರವೂ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ವಿಧಾನ ಪರಿಷತ್‌ ನಲ್ಲಿ ಡಾ.ತಳವಾರ್‌ ಸಾಬಣ್ಣ ಅವರು ಮಂಗಳವಾರ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ಎಂ.ಬಿ ಪಾಟೀಲ್ ಅವರು ಉತ್ತರಿಸಿದ್ದಾರೆ.

ಸೇಡಂ ತಾಲ್ಲೂಕಿನ ಹಂಗನಹಳ್ಳಿ ಊಡಗಿ, ಹುಡಾ(ಬಿ) ಮತ್ತು ನೃಪತುಂಗ ನಗರಗಳಲ್ಲಿ ರಾಜಶ್ರೀ ಸಿಮೆಂಟ್ಸ್‌ ಭೂಮಿ ಕೇಳಿತ್ತು. ಅದರ ಮನವಿಯನ್ನು ಪರಿಗಣಿಸಿ 2010ರ ನ.27ರಂದು ಮತ್ತು 2011ರ ಜ.25ರಂದು ಸರಕಾರವು 1961ರ ಭೂ ಸುಧಾರಣೆ ಕಾಯ್ದೆಯಡಿ ಅನುಮೋದನೆ ನೀಡಿತ್ತು. ಇದಾದ ಮೇಲೆ, ಕಂಪನಿಯು ಭೂ ಖರೀದಿಗೆ ಸಂಬಂಧಿಸಿದಂತೆ ರೈತರೊಂದಿಗೆ ನೇರ ಒಪ್ಪಂದ ಮಾಡಿಕೊಂಡಿತ್ತು. ಆಗ ಎಕರೆಗೆ 70 ಸಾವಿರ ರೂ. ಬೆಲೆ ಇತ್ತು. ಅಂತಹ ಸಂದರ್ಭದಲ್ಲಿ ಕಂಪನಿಯು 921 ಎಕರೆ ಖರೀದಿಸಿದ್ದು, ಪ್ರತೀ ಎಕರೆಗೆ 3.50 ಲಕ್ಷ ರೂ. ಪರಿಹಾರಧನ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂತ್ರಸ್ತ ರೈತರು, ತಮ್ಮ ಕುಟುಂಬಗಳ ತಲಾ ಒಬ್ಬರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡಬೇಕೆಂಬ ಆಗ್ರಹ ಮುಂದಿಟ್ಟಿದ್ದರು. ಆಗ ಕಾರ್ಖಾನೆಯು ಉದ್ಯೋಗದ ಬದಲು ಎಕರೆಗೆ ತಲಾ 2.75 ಲಕ್ಷ ರೂ. ಹೆಚ್ಚುವರಿ ಹಣವನ್ನೇ ನೀಡಿತು. ಇದಾದ ಮೇಲೂ ಕೆಲವು ರೈತರು ಮತ್ತೂ ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯಿಸಿದರು. ಆಗ ಕಾರ್ಖಾನೆಯು ಎಲ್ಲ ಸಂತ್ರಸ್ತ ರೈತರಿಗೂ ಪುನಃ ಹೆಚ್ಚುವರಿಯಾಗಿ ಎಕರೆಗೆ 1.75 ಲಕ್ಷ ರೂ. ಕೊಟ್ಟಿದೆ. ಅಂದರೆ, ಒಟ್ಟಾರೆಯಾಗಿ ಅದು ಒಂದು ಎಕರೆಗೆ ತಲಾ 8 ಲಕ್ಷ ರೂ. ಮೊತ್ತವನ್ನು ಪರಿಹಾರವಾಗಿ ನೀಡಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ವಿವರಿಸಿದ್ದಾರೆ.

ಕಂಪನಿ ಮತ್ತು ರೈತರ ನಡುವೆಯೇ ಒಪ್ಪಂದವಾಗಿದ್ದರಿಂದ ಇದರಲ್ಲಿ 1961ರ ಭೂ ಸುಧಾರಣಾ ಕಾಯ್ದೆ ಅನ್ವಯಿಸುವುದಿಲ್ಲ. ಈ ವರ್ಷದ ಮಾರ್ಚ್‌ವರೆಗಿನ ಅಂಕಿಅಂಶಗಳ ಪ್ರಕಾರ, ಈ ಕಂಪನಿಯು ಒಟ್ಟು 1,345 ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ. ಇದು ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡ 80ಕ್ಕಿಂತ ಹೆಚ್ಚಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್  ಹೇಳಿದ್ದಾರೆ.

ENGLISH SUMMARY..

Rajashree Cements

No Scope for Additional Compensation: MB Patil

Bengaluru: Rajashree Cements, which in 2010 was granted approval to purchase 573 acres for establishing a cement plant and 398.23 acres for mining in Sedam taluk of Kalaburagi district directly from farmers, has already settled the matter through private agreements. Therefore, the present demand for additional compensation from the affected farmers is not justified, and the government has no role in this matter, stated Large and Medium Industries Minister MB Patil on Tuesday.

Replying to a starred question raised by Legislative Council Member Dr Talawar Sabanna, Patil said, “Rajashree Cements had sought land in Hanghanahalli, Udagi, Huda (B) and Nripatunga Nagar in Sedam taluk. Considering the request, the government, under the Karnataka Land Reforms Act, 1961, granted approval on 27 November 2010 and again on 25 January 2011. Subsequently, the company entered into direct agreements with farmers for the purchase of land. At that time, the prevailing rate was ₹70,000 per acre, but the company paid ₹3.5 lakh per acre as compensation for 921 acres purchased.”

“At that stage, the affected farmers demanded employment for one member from each family in the proposed factory. Instead of providing jobs, the company paid an additional ₹2.75 lakh per acre. Even after this, some farmers pressed for more compensation. The company then paid all affected farmers an extra ₹1.75 lakh per acre. In total, each acre has been given ₹8 lakh as compensation,” Patil explained.

Since the agreement was solely between the company and the farmers, the provisions of the Karnataka Land Reforms Act, 1961, do not apply in this case. As of March this year, the company has employed 1,345 local residents, accounting for more than 80 per cent of its total workforce, the minister added.

Key words: No Scope, Additional, Compensation, Farmer, Minister, MB Patil