ಬೆಂಗಳೂರು,ಜನವರಿ,31,2026 (www.justkannada.in): ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ದಾವೋಸ್-2026 ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದ ನಾಲ್ಕು ದಿನಗಳ ಅವಧಿಯಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರ ನೇತೃತ್ವದಲ್ಲಿನ ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಜಾಗತಿಕ ಮತ್ತು ಭಾರತದ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು, ಹೂಡಿಕೆದಾರರು, ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಪ್ರಮುಖರು ಮತ್ತು ವಿಶ್ವ ಆರ್ಥಿಕ ವೇದಿಕೆಯ ಉನ್ನತಾಧಿಕಾರಿಗಳ ಜೊತೆಗೆ 45ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಿತು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಈ ಸಭೆಗಳಲ್ಲಿ ಏರೊಸ್ಪೇಸ್ ಆ್ಯಂಡ್ ಡಿಫೆನ್ಸ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಪಾನೀಯಗಳು ಮತ್ತು ಆಹಾರ ಸಂಸ್ಕರಣೆ, ಬಾಹ್ಯಾಕಾಶ ತಂತ್ರಜ್ಞಾನ, ಜೀವ ವಿಜ್ಞಾನ, ಡೇಟಾ ಸೆಂಟರ್ಗಳು, ಡಿಜಿಟಲ್ ಮೂಲಸೌಲಭ್ಯ ಮತ್ತು ಶುದ್ಧ ಇಂಧನ ಮುಂತಾದ ಆದ್ಯತೆಯ ವಲಯಗಳಲ್ಲಿನ 25ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕಂಪನಿಗಳು ಮತ್ತು 15ಕ್ಕೂ ಹೆಚ್ಚು ಭಾರತದ ಕಂಪನಿಗಳು ಸೇರಿವೆ.
ದಾವೋಸ್ ಸಮಾವೇಶದಿಂದ ರಾಜ್ಯದಲ್ಲಿ- ವಾಯುಯಾನ / ಸರಕು ಸಾಗಣೆ, ಪಾನೀಯಗಳು ಮತ್ತು ಆಹಾರ ಸಂಸ್ಕರಣೆ, ಶುದ್ಧ ಇಂಧನ ಉತ್ಪಾದನೆ, ಅತ್ಯಾಧುನಿಕ ತಯಾರಿಕೆ, ಬಾಹ್ಯಾಕಾಶ ತಂತ್ರಜ್ಞಾನ, ಡೇಟಾ ಸೆಂಟರ್ಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೊಸ ಬಂಡವಾಳ ಹೂಡಿಕೆ, ಉದ್ಯಮ ವಿಸ್ತರಣೆ ಮತ್ತು ಪಾಲುದಾರಿಕೆಗಳ ವಿಶ್ವಾಸಾರ್ಹ ಅವಕಾಶಗಳು ಸಾಕಾರಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ತಿಳಿಸಿದರು.
ದಾವೋಸ್ ಭೇಟಿ ಸಂದರ್ಭದಲ್ಲಿ ಸರ್ಕಾರದಿಂದ ಸರ್ಕಾರಕ್ಕೆ (ಜಿ2ಜಿ) ಮಾತುಕತೆಗಳಲ್ಲಿ ಅದರಲ್ಲೂ ವಿಶೇಷವಾಗಿ ಲಿಚೆಂಟೈನ್ ಮತ್ತು ಸಿಂಗಪುರ ಸರ್ಕಾರದ ಜೊತೆಗೆ ಸಾಂಸ್ಥಿಕ ಸಹಯೋಗ ಬಲಪಡಿಸುವ ಮತ್ತು ರಾಜ್ಯಕ್ಕೆ ಜಂಟಿಯಾಗಿ ಹೂಡಿಕೆಗಳನ್ನು ಆಕರ್ಷಿಸುವುದರ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ.
ಜಾಗತಿಕ ಆರ್ಥಿಕ ವಿದ್ಯಮಾನಗಳು, ಉದ್ಯಮಶೀಲತೆ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಬದಲಾಗುತ್ತಿರುವ ಪಾತ್ರದ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ನಿಯೋಗವು ಜಾಗತಿಕ ಪ್ರಮುಖ ಚಿಂತಕರು ಮತ್ತು ಪ್ರಭಾವಿ ಗಣ್ಯ ವ್ಯಕ್ತಿಗಳ ಜೊತೆಗೂ ಮಾತುಕತೆ ನಡೆಸಿದೆ. ಇವರಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಫಸ್ಟ್ ಡೆಪ್ಯುಟಿ ಮ್ಯಾನೆಜಿಂಗ್ ಡೈರೆಕ್ಟರ್ ಗೀತಾ ಗೋಪಿನಾಥ, ಜಿರೋಧಾ ಸಂಸ್ಥಾಪಕ, ಉದ್ಯಮಿ ಹಾಗೂ ಹೂಡಿಕೆದಾರ ನಿಖಿಲ್ ಕಾಮತ್ ಅವರು ಪ್ರಮುಖರಾಗಿದ್ದಾರೆ.
ಅಪ್ಲಿಂಕ್ ಮುಖ್ಯಸ್ಥ ಮತ್ತು ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯ ಜಾನ್ ಡಟ್ಟನ್ ಹಾಗೂ ʼಡಬ್ಲ್ಯುಇಎಫ್ʼನ ಅಂತರರಾಷ್ಟ್ರೀಯ ವ್ಯಾಪಾರ ಹಾಗೂ ಹೂಡಿಕೆ ಮುಖ್ಯಸ್ಥ ಸೀನ್ ಡೊಹರ್ಟಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ʼಡಬ್ಲ್ಯುಇಎಫ್ʼನ ವೇದಿಕೆಗಳೊಂದಿಗೆ ಕರ್ನಾಟಕದ ಬಾಂಧವ್ಯ ಬಲಪಡಿಸಲು, ನಾವೀನ್ಯತೆ, ವ್ಯಾಪಾರ ಮತ್ತು ಸುಸ್ಥಿರತೆಗೆ ಸಂಬಂಧಿಸಿದಂತೆ ಸಹಯೋಗ ಹೆಚ್ಚಿಸಲು ಮತ್ತು ʼಡಬ್ಲ್ಯುಇಎಫ್ʼ ನ ಜಾಗತಿಕ ಉಪಕ್ರಮಗಳಲ್ಲಿ ಕರ್ನಾಟಕದ ಸ್ಥಾನವನ್ನು ಬಲಪಡಿಸುವುದನ್ನು ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಮಾಹಿತಿ ನೀಡಿದರು.
ರಾಜ್ಯದ 2 ಮತ್ತು 3ನೆ ಶ್ರೇಣಿಯ ನಗರಗಳಲ್ಲಿ ಪ್ರಮುಖ ಹೂಡಿಕೆಗಳಿಗೆ ಲಭ್ಯವಿರುವ ಪೂರಕ ವ್ಯವಸ್ಥೆಗಳು, 2ನೆ ಶ್ರೇಣಿಯ ನಗರಗಳನ್ನು ಒಳಗೊಂಡಂತೆ ʼಜಿಸಿಸಿʼ ಗಳ ವಿಸ್ತರಣೆ, ಡೇಟಾ ಕೇಂದ್ರಗಳಿಗೆ ಗ್ರಿಡ್ ಸ್ಥಿರತೆ ಮತ್ತು ವಿಶ್ವಾಸಾರ್ಹತೆಯ ವಿದ್ಯುತ್ ಹಾಗೂ ಸಮೃದ್ಧ ನೀರಿನ ಪೂರೈಕೆ ಮತ್ತು ನೀರಿನ ದಕ್ಷ ನಿರ್ವಹಣೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆಗಳು ಕೇಂದ್ರೀಕೃತಗೊಂಡಿದ್ದವು.
ಎಲ್ಲ ಸಭೆ- ಸಮಾಲೋಚನೆಗಳಲ್ಲಿ -ರಾಜ್ಯದ ವಿವಿಧ ವಲಯಗಳಲ್ಲಿನ ಕರ್ನಾಟಕ ಸರ್ಕಾರದ ಕೊಡುಗೆಗಳು ಮತ್ತು ಅನುಷ್ಠಾನ ಸಿದ್ಧತೆಯ ವಿವರಗಳನ್ನು ಹಂಚಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಉದ್ಯಮ ಸ್ನೇಹಿ ನೀತಿ ಮತ್ತು ಪೂರಕ ಸೌಲಭ್ಯಗಳನ್ನು ಒಳಗೊಂಡಂತೆ ಕೃತಕ ಜಾಣ್ಮೆಯ ಪ್ರತಿಭೆ, ʼಜಿಸಿಸಿʼಗಳು, ಶುದ್ಧ ಉತ್ಪಾದನೆ ಮುಂತಾದವುಗಳಿಗೆ ಕರ್ನಾಟಕವು ಭಾರತದ ಪ್ರಮುಖ ತಾಣವಾಗಿರುವುದನ್ನು ಮನದಟ್ಟು ಮಾಡಿಕೊಡಲಾಗಿದೆ.
ಕೃತಕ ಬುದ್ಧಿಮತ್ತೆ (ಎಐ), ಡೇಟಾ ಸೆಂಟರ್ಗಳು, ಸೆಮಿಕಂಡಕ್ಟರ್ಗಳು, ಸ್ಪೇಸ್ ಟೆಕ್, ಇಂಡಸ್ಟ್ರಿ 4.0, ಒಳಗೊಂಡಂತೆ ಹೊಸ ತಲೆಮಾರಿನ ಕೈಗಾರಿಕೆಗಳಿಗೆ ರಾಜ್ಯವನ್ನು ಆದ್ಯತೆಯ ತಾಣವನ್ನಾಗಿ ಜಾಗತಿಕ ಹೂಡಿಕೆದಾರರು ಮತ್ತು ತಂತ್ರಜ್ಞಾನ ದಿಗ್ಗಜರಿಗೆ ಪರಿಚಯಿಸಲು ರಾಜ್ಯದ ನಿಯೋಗವು, “ಕರ್ನಾಟಕದ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮದ ಅನುಕೂಲತೆ” ಕುರಿತು ಸಂವಾದವನ್ನು ಸಹ ಏರ್ಪಡಿಸಿತ್ತು.
ಕರ್ನಾಟಕದಲ್ಲಿ ಉದ್ಯಮ ವಿಸ್ತರಣೆ ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಯೋಗವು ಬಹುರಾಷ್ಟ್ರೀಯ ಕಂಪನಿಗಳಾದ ಕೋಕ ಕೋಲಾ, ಲೆನೊವೊ, ವೆಲ್ಸ್ಪನ್ ಗ್ರೂಪ್, ಅಮೆಜಾನ್ ವೆಬ್ ಸರ್ವೀಸಸ್, ನೋಕಿಯಾ, ಪೇಪಲ್, ಸ್ನೈಡರ್ ಎಲೆಕ್ಟ್ರಿಕ್, ಕ್ಲೌಡ್ಫ್ಲೇರ್, ಇಂಪೇರಿಯಲ್ ಕಾಲೇಜ್ ಲಂಡನ್, ಮಿಸ್ಟ್ರಲ್ ಎಐ, ಅಕ್ಟೋಪಸ್ ಎನರ್ಜಿ, ಆಕ್ಸಾನ್ ಕೇಬಲ್ಸ್, ಕ್ಸೈಲೆಮ್, ಒಯೆಜರ್ ಟೆಕ್ನಾಲಜೀಸ್, ವಾಸ್ಟ್ ಸ್ಪೇಸ್- ಮುಂತಾದವುಗಳ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚೆ ನಡೆಸಿತು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಶೃಂಗಸಭೆಯ ನಂತರದ ಹೊಸ ಹೂಡಿಕೆಗಳು
ಶೃಂಗಸಭೆಯಲ್ಲಿನ (ಜಿಐಎಂ) ಬದ್ಧತೆಗಳನ್ನು ಮೀರಿ, ರಾಜ್ಯಕ್ಕೆ ಕಳೆದ 11 ತಿಂಗಳುಗಳಲ್ಲಿ ತಯಾರಿಕೆ, ನವೀಕರಿಸಬಹುದಾದ ಇಂಧನ ಮೂಲಗಳು, ಡೇಟಾ ಸೆಂಟರ್ ಮತ್ತು ʼಜಿಸಿಸಿʼಗಳಲ್ಲಿ ₹ 1.1 ಲಕ್ಷ ಕೋಟಿ ಮೊತ್ತದ ಹೊಸ ಹೂಡಿಕೆಗಳು ಹರಿದು ಬಂದಿವೆ. ತಯಾರಿಕೆ ಮತ್ತು ಕೈಗಾರಿಕಾ ವಲಯದಿಂದ ₹ 66,293 ಕೋಟಿ , ನವೀಕರಿಸಬಹುದಾದ ಇಂಧನ ಮೂಲಗಳಿಂದ ₹ 20,913 ಕೋಟಿ , ಜಾಗತಿಕ ಸಾಮರ್ಥ್ಯ ಕೇಂದ್ರಗಳಿಂದ (ಜಿಸಿಸಿ) ₹ 12,500 ಕೋಟಿ ಮತ್ತು ಡೇಟಾ ಸೆಂಟರ್ಗಳಿಂದ ₹ 6,350 ಕೋಟಿ ಹೂಡಿಕೆಗಳು ಹರಿದು ಬಂದಿದೆ ಎಂದು ಸಚಿವ ಎಂ.ಬಿ ಪಾಟೀಲ್ ಮಾಹಿತಿ ನೀಡಿದರು.
ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ (ಇಎಸ್ಡಿಂ) /ಸೆಮಿಕಂಡಕ್ಟರ್ಸ್, ವಾಹನ ಹಾಗೂ ವಿದ್ಯುತ್ಚಾಲಿತ ವಾಹನ (ಇವಿ) ತಯಾರಿಕೆ, ಏರೋಸ್ಪೇಸ್ ಆ್ಯಂಡ್ ಡಿಫೆನ್ಸ್ ತಯಾರಿಕಾ ವಲಯಗಳಲ್ಲಿ ₹ 1.5 ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ. ಕರ್ನಾಟಕದ ಆದ್ಯತೆಗಳು ಹೆಚ್ಚು ಸ್ಪಷ್ಟವಾಗಿವೆ: ಹೂಡಿಕೆ ಇಂಗಿತವನ್ನು ತ್ವರಿತ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಕಾರ್ಯಗತಗೊಳಿಸುವಿಕೆ. ಭೂಮಿ ಹಂಚಿಕೆ, ಶಾಸನಬದ್ಧ ಅನುಮೋದನೆಗಳು, ನೀರು, ವಿದ್ಯುತ್ ಪೂರೈಕೆ ಮತ್ತು ಕಾಲಮಿತಿಗೆ ಒಳಪಟ್ಟ ತ್ವರಿತ ಅನುಮತಿ ನೀಡಲು ರಾಜ್ಯ ಸರ್ಕಾರವು ಹೂಡಿಕೆದಾರರ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದರು.
ʼಜಿಐಎಂʼ ಹೂಡಿಕೆ ಬದ್ಧತೆಯ ಪರಿವರ್ತನೆ
ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆ 2025 (ಫೆಬ್ರುವರಿ 2025) ನಲ್ಲಿ, ₹ 10.27 ಲಕ್ಷ ಕೋಟಿ ಮೊತ್ತದ ಹೂಡಿಕೆ ಬದ್ಧತೆಗಳು ವ್ಯಕ್ತವಾಗಿದ್ದವು. ಅಂದಾಜು 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿ ಆಗುವುದನ್ನು ನಿರೀಕ್ಷಿಸಲಾಗಿತ್ತು. ಈಗ ನಮ್ಮ ಗಮನವು ಕೇವಲ ಘೋಷಣೆಗಳಿಗೆ ಸೀಮಿತವಾಗಿರದೆ, ಈ ಬದ್ಧತೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಆದ್ಯತೆ ನೀಡಲಾಗಿದೆ. ಒಂದು ವರ್ಷದೊಳಗೆ, ಬಂಡವಾಳ ಹೂಡಿಕೆಯ ಶೇಕಡ 50ರಷ್ಟು ಬದ್ಧತೆಗಳು ʼಕರ್ನಾಟಕ ಉದ್ಯೋಗ ಮಿತ್ರʼದ ಮೂಲಕ ಕಾರ್ಯಗತಗೊಳ್ಳುತ್ತಿವೆ. ತಯಾರಿಕಾ ವಲಯವು ಶೇಕಡ 60ರಷ್ಟು ಕಾರ್ಯಗೊಳ್ಳುತ್ತ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
Key words: Davos-2026 Conference, 45 bilateral meetings, Minister, M.B. Patil







