ಬೆಂಗಳೂರು,ಜನವರಿ,12,2026 (www.justkannada.in): ಸ್ಥಳೀಯವಾಗಿ ಉತ್ಪಾದನೆಯನ್ನು ಸಾಧ್ಯವಾಗಿಸುವ ಕೈಗಾರಿಕಾ ಸಹಭಾಗಿತ್ವದ ಅಡಿ ಕರ್ನಾಟಕ ಮೂಲದ ರಿವರ್ ಮೊಬಿಲಿಟಿ ಕಂಪನಿ ತಯಾರಿಸಿರುವ ಯಮಾಹಾ ಇಸಿ-06 ವಿದ್ಯುತ್ ಚಾಲಿತ ಬೈಕ್ ಅನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಯಮಾಹಾ ಕಂಪನಿಗೆ ಇಲ್ಲಿನ ತಯಾರಿಕಾ ಘಟಕದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, ‘ನಗರ ಸಂಚಾರವನ್ನು ಪರಿಸರಸ್ನೇಹಿ, ಸುಗಮ ಮತ್ತು ಸುಸ್ಥಿರಗೊಳಿಸುವಂತಹ ಇಂತಹ ದ್ವಿಚಕ್ರ ವಾಹನ ತಯಾರಿಕೆ ಸ್ಥಳೀಯವಾಗಿಯೇ ಆಗತೊಡಗಿರುವುದು ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಒಂದು ಉಜ್ವಲ ಅಧ್ಯಾಯವಾಗಿದೆ. ಇದು ರಾಜ್ಯವು ಭವಿಷ್ಯದ ಸಂಚಾರ ವ್ಯವಸ್ಥೆಯ ನಿರ್ಮಾಣದ ಸರಿಯಾದ ಪಥದಲ್ಲಿ ಸಾಗುತ್ತಿರುವುದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ’ ಎಂದು ಬಣ್ಣಿಸಿದ್ದಾರೆ. ಇದೇ ವೇಳೆಯಲ್ಲಿ ಅವರು ಕಂಪನಿಯ ತಯಾರಿಕಾ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ವೀಕ್ಷಿಸಿದರು.
ಈ ಘಟಕದಲ್ಲಿ ವರ್ಷಕ್ಕೆ ಇಂತಹ ಉತ್ಕೃಷ್ಟ ಗುಣಮಟ್ಟದ 2 ಸಾವಿರ ಇ.ವಿ. ಬೈಕ್ ತಯಾರಿಸಲಾಗುವುದು. ಇವಕ್ಕೆ ಇಲ್ಲೇ ತಯಾರಿಸುವ ಬ್ಯಾಟರಿ ಅಳವಡಿಸಲಾಗುವುದು. ಇದು 1 ಲಕ್ಷ ಕಿ.ಮೀ. ವರೆಗೂ ವಾಹನ ಓಡಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕೆ 10 ವರ್ಷಗಳ ವಾರಂಟಿ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಉತ್ಪಾದನೆಯಿಂದ ವ್ಯಾಪಕ ಆರ್ಥಿಕ ಮೌಲ್ಯವೂ ಸೃಷ್ಟಿಯಾಗಲಿದೆ. ಇದು ಕೌಶಲ್ಯಪೂರ್ಣ ಉದ್ಯೋಗಗಳ ಸೃಷ್ಟಿ, ಸ್ಥಳೀಯ ಪೂರೈಕೆ ಸರಪಳಿ ಬಲವರ್ಧನೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾಲಿಗೆ ಸದಾವಕಾಶ ಇವೆಲ್ಲವನ್ನೂ ಸಾಧ್ಯವಾಗಿಸಲಿದೆ ಎಂದು ಅವರು ವಿವರಿಸಿದ್ದಾರೆ.
ವಾಹನ ಮಾರುಕಟ್ಟೆ ಈಗ ವಿದ್ಯುತ್ ಚಾಲಿತ ವಾಹನಗಳತ್ತ ಹೋಗುತ್ತಿದೆ. ರಾಜ್ಯದಲ್ಲಿ ಕೂಡ ಇದನ್ನು ಗಮನಿಸಿ, ಈಗಾಗಲೇ ಸಾವಿರಾರು ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಇವುಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಲಾಗುವುದು. ಇದು ಇ.ವಿ. ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರವು ಹೊಂದಿರುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಸಚಿವ ಎಂ.ಬಿ ಪಾಟೀಲ್ ಇಡೀ ಕಾರ್ಖಾನೆಯಲ್ಲಿ ಓಡಾಡಿ, ಬೈಕ್ ತಯಾರಿಕೆಯನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಮತ್ತು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಯಮಾಹಾ ಇಂಡಿಯಾ ಅಧ್ಯಕ್ಷ ಜಿಮ್ ಅಯೋಟಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ರಿವರ್ ಸಿಇಒ ಅರವಿಂದ ಮಣಿ, ಸಹ ಸಂಸ್ಥಾಪಕ ವಿಪಿನ್ ಜಾರ್ಜ್ ಮುಂತಾದವರು ಉಪಸ್ಥಿತರಿದ್ದರು.
Key words: Minister, M.B. Patil, hands over, electric Yamaha EC-06 bike







