ಬೆಂಗಳೂರು-ವಿಜಯಪುರ ಪ್ರಪ್ರಥಮ ವಿಶೇಷ ರೈಲು: ಖಾಯಂಗೊಳಿಸಲು ಕ್ರಮ-ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಡಿಸೆಂಬರ್,25,2025 (www.justkannada.in): ಕ್ರಿಸ್ಮಸ್ ಮತ್ತು ವರ್ಷಾಂತ್ಯದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ವಿಶೇಷ ರೈಲನ್ನು ಓಡಿಸಿರುವುದು ಸ್ವಾಗತಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಖಾಯಂ ರೈಲು ಸೇವೆಯಾಗಿ ಪರಿವರ್ತಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್ ಅವರು, ಬೆಂಗಳೂರಿನಿಂದ ವಿಜಯಪುರಕ್ಕೆ ಈ ಎರಡೂ ಬೈಪಾಸ್ ಮೂಲಕವೇ ರೈಲು ಸಾಗುವಂತೆ ಮಾಡಬೇಕು ಎಂದು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಈ‌ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ಹಲವು ಸಭೆಗಳನ್ನು ನಡೆಸಲಾಗಿದೆ. ನಮ್ಮ ಪ್ರಯತ್ನಕ್ಕೆ ವಿಶೇಷ ರೈಲಿನ ರೂಪದಲ್ಲಿ ಮೊದಲ ಯಶಸ್ಸು ಸಿಕ್ಕಿರುವುದು ಸಂತಸ ತಂದಿದೆ ಎಂದಿದ್ದಾರೆ.

ಬೈಪಾಸ್ ಮೂಲಕ ಚಲಿಸಿದ್ದ ಕಾರಣಕ್ಕೆ ಎರಡೂ ಕಡೆ ಎಂಜಿನ್ ಬದಲಿಸುವ ಪ್ರಮೇಯ ಬಂದಿಲ್ಲ. ಬಾಗಲಕೋಟೆ, ವಿಜಯಪುರ ಕಡೆಗೆ ಹೋಗುವ ಎಲ್ಲ ರೈಲುಗಳನ್ನು ಇದೇ ರೀತಿ ಬೈಪಾಸ್ ಮೂಲಕ ಸಂಚರಿಸುವಂತೆ‌ ಮಾಡಿದರೆ ಪ್ರಯಾಣದ ಅವಧಿ ಕಡಿಮೆ‌ ಮಾಡಬಹುದು ಎಂಬುದು ನನ್ನ ನಿಲುವು. ಈ ನಿಟ್ಟಿನಲ್ಲಿ ರೈಲ್ವೆ ಅಧಿಕಾರಿಗಳ ಜತೆ ಸಭೆಗಳು ನಡೆದಿವೆ ಎಂದು ಹೇಳಿದರು.

ಈ ವಿಶೇಷ ರೈಲು ಕೇವಲ ಒಂಬತ್ತು ನಿಲುಗಡೆ ಹೊಂದಿತ್ತು. ಬುಧವಾರ ರಾತ್ರಿ ಯಶವಂತಪುರದಿಂದ ಹೊರಟ ರೈಲು ಗುರುವಾರ ಬೆಳಿಗ್ಗೆ 9 ಗಂಟೆ ಬದಲಿಗೆ 11 ಗಂಟೆಗೆ ತಲುಪಿದೆ. ವಿಶೇಷ ರೈಲಾಗಿದ್ದರಿಂದ ನಿಗದಿತ ಸಮಯಕ್ಕೆ ತಲುಪಲು ಆಗಿಲ್ಲವಷ್ಟೆ. ಈ ವಿಶೇಷ ರೈಲು ಸೇವೆಗೆ ವಿಜಯಪುರ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು-ವಿಜಯಪುರ ನಡುವಿನ ರೈಲು ಪ್ರಯಾಣದ ಅವಧಿಯನ್ನು ಈಗಿನ 14 ಗಂಟೆಗಳಿಂದ 10 ಗಂಟೆಗಳಿಗೆ ಇಳಿಸಲು ಪ್ರಯತ್ನ ನಡೆದಿದೆ. ಹೀಗಾಗಿ, ಮೈಸೂರು- ಫಂಡರಪುರ ನಡುವಿನ ಗೋಲಗುಂಬಜ್ ಎಕ್ಸ್‌ ಪ್ರೆಸ್‌ ರೈಲನ್ನು ಖಾಯಂ ಆಗಿ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕವೇ ಓಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಸಂಬಂಧವಾಗಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೋಮಣ್ಣ ಅವರಿಗೆ ಪತ್ರ ಬರೆದು, ವ್ಯವಹರಿಸಲಾಗುವುದು. ಬೆಂಗಳೂರಿನಿಂದ ರಾತ್ರಿ ಹೊರಡುವ ರೈಲುಗಳು ವಿಜಯಪುರಕ್ಕೆ ಬೆಳಿಗ್ಗೆ 6-7 ಗಂಟೆಯ ಹೊತ್ತಿಗೆ ತಲುಪುವಂತೆ ವೇಳಾಪಟ್ಟಿ ಬದಲಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಎಂ.ಬಿ ಪಾಟೀಲ್ ಪ್ರತಿಪಾದಿಸಿದ್ದಾರೆ.

ಇದಲ್ಲದೆ, ವಿಜಯಪುರಕ್ಕೆ ಒಂದು ಪ್ರತ್ಯೇಕ ವಿಶೇಷ ರೈಲನ್ನು ಖಾಯಂ ಆಗಿ ಓಡಿಸಬೇಕು. ಸಾಮಾನ್ಯವಾಗಿ ವಿಶೇಷ ರೈಲುಗಳು ನಂತರದ ದಿನಗಳಲ್ಲಿ ಖಾಯಂ ಆಗುತ್ತವೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ತಿಳಿಸಿದ್ದಾರೆ.

Key words: First, Bengaluru-Vijayapura, special train, Minister, M.B. Patil