ಲಂಡನ್,ನವೆಂಬರ್,27,2025 (www.justkannada.in): ಕೈಗಾರಿಕಾ ಅನಿಲ ಮತ್ತು ಸಂಬಂಧಿತ ಉತ್ಪಾದನೆಯಲ್ಲಿ ಸಕ್ರಿಯವಾಗಿರುವ ಪ್ರಾಕ್ಸ್ ಏರ್ ಇಂಡಿಯಾ ಕಂಪನಿಯು ಕರ್ನಾಟಕದಲ್ಲಿ ಲಿಕ್ವಿಡ್ ಆಕ್ಸಿಜನ್ ಮತ್ತು ನೈಟ್ರೋಜನ್ ತಯಾರಿಕಾ ಘಟಕ ಸ್ಥಾಪನೆಗೆ ಮುಂದಿನ 3 ವರ್ಷಗಳಲ್ಲಿ 210 ಕೋಟಿ ರೂ. ಬಂಡವಾಳ ಹೂಡಲಿದೆ. ಈ ಸಂಬಂಧ ರಾಜ್ಯ ಸರಕಾರದೊಂದಿಗೆ ಕಂಪನಿಯು ಒಡಂಬಡಿಕೆಗೆ ಅಂಕಿತ ಹಾಕಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಹೂಡಿಕೆ ಆಕರ್ಷಣೆಗಾಗಿ ಅಧಿಕೃತ ನಿಯೋಗದೊಂದಿಗೆ ಲಂಡನ್ ಪ್ರವಾಸ ಕೈಗೊಂಡಿರುವ ಸಚಿವ ಎಂ.ಬಿ ಪಾಟೀಲ್ ಈ ಬಗ್ಗೆ ಮಾತನಾಡಿ, ಪ್ರಾಕ್ಸ್ ಏರ್ ಇಂಡಿಯಾ ಈ ಹಣಕಾಸು ವರ್ಷದಿಂದಲೇ ತನ್ನ ಈ ಹೂಡಿಕೆ ಆರಂಭಿಸಲಿದೆ. ಸರಕಾರ ಕೂಡ ಭೂಮಿ, ಏಕಗವಾಕ್ಷಿ ಅನುಮೋದನೆಗಳು ಮತ್ತು ಮೂಲಸೌಕರ್ಯಗಳನ್ನು ತ್ವರಿತವಾಗಿ ಪೂರೈಸಲಿದೆ ಎಂದಿದ್ದಾರೆ.
ಇದಲ್ಲದೆ, ವೈಮಾಂತರಿಕ್ಷ, ರಕ್ಷಣೆ ಮತ್ತು ಡ್ರೋನ್ ವಲಯಗಳಲ್ಲಿ ಉಪಯೋಗಕ್ಕೆ ಬರುವ ಹೆಲಿಕ್ಯಾಲ್-ಆ್ಯಂಟೆನಾ ತಂತ್ರಜ್ಞಾನಕ್ಕೆ ಹೆಸರಾಗಿರುವ ಹೆಲಿಕ್ಸ್ ಜಿಯೋಸ್ಪೇಸ್, ಉಪಗ್ರಹಗಳಿಗೆ ಬೇಕಾಗುವ ಆ್ಯಂಟೆನಾ ತಯಾರಿಕೆಗೆ ಹೆಸರಾಗಿರುವ ಆಕ್ಸಫರ್ಡ್ ಸ್ಪೇಸ್ ಸಿಸ್ಟಮ್ಸ್ ಕಂಪನಿ (ಒಎಸ್ಎಸ್) ಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಒಎಸ್ಎಸ್ ಕಂಪನಿಗೆ ತನ್ನ ನಿರ್ದಿಷ್ಟ ಅಗತ್ಯ, ಬೇಕಾದ ಬೆಂಬಲ ಇವುಗಳನ್ನು ವಿವರಿಸಿ, ರಾಜ್ಯ ಸರಕಾರಕ್ಕೆ ಟಿಪ್ಪಣಿ ಸಲ್ಲಿಸುವಂತೆ ಹೇಳಲಾಗಿದೆ ಎಂದು ಅವರು ನುಡಿದಿದ್ದಾರೆ.
ಬ್ರಿಟನ್ನಿನಲ್ಲಿ ಭಾರತದ ಹೈಕಮಿಷನರ್ ಆಗಿರುವ ವಿಕ್ರಮ್ ದೊರೆಸ್ವಾಮಿ ಅವರನ್ನು ಕೂಡ ಈ ಸಂದರ್ಭದಲ್ಲಿ ಭೇಟಿ ಮಾಡಿದ್ದು, ಯುನೈಟೆಡ್ ಕಿಂಗ್ ಡಮ್ ಮತ್ತು ಕರ್ನಾಟಕದ ನಡುವಿನ ಕೈಗಾರಿಕಾ ಬಾಂದವ್ಯ ಕುರಿತು ಚರ್ಚಿಸಲಾಗಿದೆ. ಜೊತೆಗೆ, ಉದ್ದೇಶಿತ ಕ್ವಿನ್ ಸಿಟಿ ಪ್ರದೇಶದಲ್ಲಿ `ಯು.ಕೆ. ಟೆಕ್ ಪಾರ್ಕ್’ ಸ್ಥಾಪಿಸಲು ಇರುವ ಅವಕಾಶಗಳ ಬಗ್ಗೆ ಅವರೊಂದಿಗೆ ವಿಚಾರ ವಿನಿಮಯ ನಡೆಸಿದ್ದೇನೆ. ಇದು ಸಾಧ್ಯವಾದರೆ ಸಂಶೋಧನೆ ಮತ್ತು ಅಭಿವೃದ್ಧಿ, ನವೋದ್ಯಮ ಮತ್ತು ಉನ್ನತ ಮಟ್ಟದ ತಯಾರಿಕೆ ಕಾರ್ಯಪರಿಸರದ ಬಲವರ್ಧನೆ ಆಗಲಿದೆ. ಈ ಸಂಬಂಧ ನಮ್ಮ ಹೈಕಮಿಷನರ್ ಅವರು ಇಲ್ಲಿನ ಕಂಪನಿಗಳೊಂದಿಗೆ ಮಾತುಕತೆ ನಡೆಸಿ, ಅದನ್ನು ರಾಜ್ಯ ಸರಕಾರಕ್ಕೆ ತಿಳಿಸುವುದಾಗಿ ಹೇಳಿದ್ದಾರೆ ಎಂದು ಎಂ.ಬಿ ಪಾಟೀಲ್ ನುಡಿದಿದ್ದಾರೆ.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಅವರು ನಿಯೋಗದಲ್ಲಿ ಇದ್ದಾರೆ.
Key words: Prox Air India, invest, Rs 210 crore, state, Minister, M.B. Patil







