ಲಂಡನ್,ನವೆಂಬರ್,25,2025 (www.justkannada.in): ಯುನೈಟೆಡ್ ಕಿಂಗ್ಡಮ್ ನ ಎಸ್.ಸಿ.ಐ ಸೆಮಿಕಂಡಕ್ಟರ್ಸ್ ಕಂಪನಿಯು ಕರ್ನಾಟಕದಲ್ಲಿ ತನ್ನ ಗ್ಲೋಬಲ್ ಕೇಪಬಿಲಿಟಿ ಸೆಂಟರ್ (ಜಿಸಿಸಿ) ಸ್ಥಾಪಿಸುವ ಆಸಕ್ತಿ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಕಂಪನಿಯ ಉದ್ದೇಶಿತ ಬಂಡವಾಳ ಹೂಡಿಕೆ ಮತ್ತು ಭವಿಷ್ಯದ ಸಹಭಾಗಿತ್ವ ಎರಡಕ್ಕೂ ಸರಕಾರದ ಸಂಪೂರ್ಣ ಬೆಂಬಲದ ಖಚಿತ ಭರವಸೆಯನ್ನು ಕೊಡಲಾಗಿದೆ. ಇದರಿಂದ ಕಂಪ್ಯೂಟರ್ ಸುರಕ್ಷತೆಗೆ ಅಗತ್ಯವಿರುವ ಅಂತರ್ಗತ ಸುರಕ್ಷೆಯನ್ನು ಹೊಂದಿರುವ ಮೈಕ್ರೋಪ್ರೋಸೆಸರುಗಳ ತಯಾರಿಕೆ ಸ್ಥಳೀಯವಾಗಿಯೇ ಸಾಧ್ಯವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಅಧಿಕೃತವಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಅವರು, ಸೋಮವಾರ ತಡರಾತ್ರಿ ಎಸ್.ಸಿ.ಐ ಸೆಮಿಕಂಡಕ್ಟರ್ ಕಂಪನಿ ಮಾತ್ರವಲ್ಲದೆ, ವಿಯರ್ ಗ್ರೂಪ್, ಲೇಟೋಸ್ ಡೇಟಾ ಸೆಂಟರ್, ಸ್ಯಾಮ್ಕೋ ಹೋಲ್ಡಿಂಗ್ಸ್, ಎ.ಆರ್.ಎಂ. ಸೆಮಿಕಂಡಕ್ಟರ್ಸ್ ಕಂಪನಿಗಳ ಮುಖ್ಯಸ್ಥರೊಂದಿಗೆ ಬಂಡವಾಳ ಹೂಡಿಕೆ/ಹೂಡಿಕೆ ವಿಸ್ತರಣೆ ಕುರಿತು ಪ್ರತ್ಯೇಕ ಸಭೆಗಳನ್ನು ನಡೆಸಿದರು.
ಈ ಬಗ್ಗೆ ಮಾತನಾಡಿದ ಸಚಿವರು, ಎ.ಆರ್.ಎಂ. ಸೆಮಿಕಂಡಕ್ಟರ್ಸ್ ಕಂಪನಿಯ ಎರಡನೇ ಅತ್ಯಂತ ದೊಡ್ಡ ಕಚೇರಿ ಬೆಂಗಳೂರಿನಲ್ಲಿದ್ದು, ಅದು ಆಸ್ಟಿನ್-ಬೆಂಗಳೂರು-ಕ್ಯಾಲಿಫೋರ್ನಿಯಾ (ಎಬಿಸಿ) ವ್ಯಾಪ್ತಿಯನ್ನು ಹೊಂದಿದೆ. ಈಗ ಕಂಪನಿಯು ತನ್ನ ಜಾಗತಿಕ ಕೇಂದ್ರಗಳಲ್ಲಿ ಸಹಭಾಗಿತ್ವವನ್ನು ವಿಸ್ತರಿಸಿಕೊಳ್ಳಲು ಬಯಸಿದ್ದು, ಬೆಂಗಳೂರಿನಲ್ಲಿ ತನ್ನ ಮತ್ತೊಂದು ಕಚೇರಿಯನ್ನು ಸ್ಥಾಪಿಸಲು ಒಲವು ಹೊಂದಿದೆ. ಈ ಸಂದರ್ಭದಲ್ಲಿ ಕೇಂಬ್ರಿಡ್ಜ್ ಮತ್ತು ಬೆಂಗಳೂರು ನಗರಗಳೆರಡೂ ಸೆಮಿಕಂಡಕ್ಟರ್ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಹಾಗೂ ಪ್ರತಿಭಾವಂತ ಯುವಜನರನ್ನು ಹೊಂದಿರುವುದನ್ನು ಚರ್ಚಿಸಲಾಗಿದೆ ಎಂದಿದ್ದಾರೆ.
ಸ್ಯಾಮ್ಕೋ ಹೋಲ್ಡಿಂಗ್ಸ್ ಕಂಪನಿಯು ರಾಜ್ಯದ ಮರುಬಳಕೆ ಇಂಧನ, ಎಥನಾಲ್ ಉತ್ಪಾದನೆ ಮತ್ತು ಬ್ಯಾಟರಿ ತಯಾರಿಕೆ ವಲಯಗಳಲ್ಲಿ ಬಂಡವಾಳ ಹೂಡುವ ಮನಸ್ಸು ಹೊಂದಿದೆ. ಹಾಗೆಯೇ ಲೇಟೋಸ್ ಡೇಟಾ ಸೆಂಟರ್ ಕಂಪನಿಯು ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಕ್ಕೆ ಸಂಬಂಧಿಸಿದ ಇನ್ಕ್ಯುಬೇಷನ್ ಕೇಂದ್ರವನ್ನು ತೆರೆಯಲು ಆಸಕ್ತಿ ತೋರಿಸಿದೆ. ನಾವು ಉದ್ದೇಶಿತ ಕ್ವಿನ್ ಸಿಟಿಯಲ್ಲಿ ಇದಕ್ಕೆಲ್ಲ ಆದ್ಯತೆ ಕೊಡುತ್ತಿರುವ ಸಂಗತಿಯನ್ನು ಅವರ ಗಮನಕ್ಕೆ ತಂದಿದ್ದೇವೆ. ಜತೆಗೆ ಮರುಬಳಕೆ ಇಂಧನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಿಗೆ ಸಂಬಂಧಿಸಿದ ಡೇಟಾ ಸೆಂಟರುಗಳನ್ನು ತೆರೆಯಲು ಕರ್ನಾಟಕದಲ್ಲಿರುವ ಅವಕಾಶಗಳನ್ನು ಮನದಟ್ಟು ಮಾಡಿಕೊಟ್ಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಗಣಿಗಾರಿಕೆ, ಖನಿಜ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ವಿಯರ್ ಗ್ರೂಪ್ ಕಂಪನಿಯು ಬೆಂಗಳೂರಿನ ಸಮೀಪ ಈಗಾಗಲೇ ತನ್ನ ತಯಾರಿಕಾ ಘಟಕ ಹೊಂದಿದ್ದು, ಅದನ್ನು ಮತ್ತಷ್ಟು ವಿಸ್ತರಿಸಲು ಚಿಂತಿಸುತ್ತಿದೆ. ಇದಕ್ಕೆ ರಾಜ್ಯದ ಹೊಸ ಕೈಗಾರಿಕಾ ನೀತಿಯ ಪ್ರಕಾರ ಎಲ್ಲಾ ಬೆಂಬಲ ಕೊಡುವ ಆಶ್ವಾಸನೆ ಕೊಡಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.
ಮಾತುಕತೆಯಲ್ಲಿ ಎಸ್.ಸಿ.ಐ ಸೆಮಿಕಂಡಕ್ಟರ್ಸ್ ಪರವಾಗಿ ಸಿಇಎ ಹೇಡನ್ ಪೋವಿ, ವಿಯರ್ ಗ್ರೂಪ್ ಪರವಾಗಿ ಅದರ ಮುಖ್ಯಸ್ಥ ಜಾಕ್ ಓ’ಬ್ರಿಯನ್, ಲೇಟೋಸ್ ಪರವಾಗಿ ಅದರ ಸಂಸ್ಥಾಪಕ ಮೈಕ್ ಕಾರ್ಲಿನ್, ರಾಮ್ ಶಂಕರ್, ಹರೀಂದರ್ ಧಾಲೀವಾಲ್, ಸ್ಯಾಮ್ಕೋ ಹೋಲ್ಡಿಂಗ್ಸ್ ಪರವಾಗಿ ಅಧ್ಯಕ್ಷ ಸಂಪತ್ ಕುಮಾರ್ ಮಲ್ಯ, ನಿರ್ದೇಶಕ ಅಶ್ವಿನ್ ಸಂಪತ್ಕುಮಾರ್, ಸಿಇಒ ವೈದ್ಯನಾಥನ್ ನಟೇಶನ್ ಮತ್ತು ಎ.ಆರ್.ಎಂ. ಸೆಮಿಕಂಡಕ್ಟರ್ಸ್ ಪರವಾಗಿ ಪೀಟರ್ ಸ್ಟೀಫನ್ಸ್ ಭಾಗವಹಿಸಿದ್ದರು.
ರಾಜ್ಯ ಸರಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಇದ್ದರು.
Key words: SCI, Semiconductors, GCC, Bengaluru, Minister, M B Patil







