ಐನಾಕ್ಸ್‌ ವಿಂಡ್‌ ಕಂಪನಿಯಿಂದ ಕುಷ್ಟಗಿಯಲ್ಲಿ 400 ಕೋಟಿ ರೂ. ಹೂಡಿಕೆ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಅಕ್ಟೋಬರ್,16,2025 (www.justkannada.in):  ಪವನ ವಿದ್ಯುತ್‌ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿರುವ ದೈತ್ಯಾಕಾರದ ಬ್ಲೇಡ್‌ಗಳು ಮತ್ತು ಗೋಪುರಗಳ ಉತ್ಪಾದನೆಗೆ ಹೆಸರಾಗಿರುವ ಐನಾಕ್ಸ್‌ವಿಂಡ್‌ ಕಂಪನಿಯು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪ ಕೈಗಾರಿಕಾ ಪ್ರದೇಶದಲ್ಲಿ ₹400 ಕೋಟಿ ಬಂಡವಾಳ ಹೂಡಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ತಮ್ಮನ್ನು ಇಲ್ಲಿನ‌ ಖನಿಜ ಭವನದಲ್ಲಿ ಭೇಟಿಯಾದ ಕಂಪನಿಯ ಕಾರ್ಪೊರೇಟ್ ತಂತ್ರಗಾರಿಕೆ ವಿಭಾಗದ ಅಧ್ಯಕ್ಷ ಸಂತೋಷ್‌ ಖೈರ್ನಾರ್‌ ಜೊತೆ ಸಚಿವ ಎಂ.ಬಿ ಪಾಟೀಲ್ ಅವರು ಮಾತುಕತೆ ನಡೆಸಿದರು.

ಬಳಿಕ ಮಾಹಿತಿ ನೀಡಿದ ಸಚಿವ ಎಂ.ಬಿ ಪಾಟೀಲ್, ʻಐನಾಕ್ಸ್‌ವಿಂಡ್‌ ಕಂಪನಿಯ ಮಾಲೀಕರಾಗಿರುವ ದೇವಾಂಶ್‌ ಜೈನ್‌ ಅವರು ತಮ್ಮ ಕಂಪನಿಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆಯೇ 70 ಎಕರೆ ಭೂಮಿ ಬೇಕು. ಅತ್ಯುತ್ತಮ ಮತ್ತು ವಿಶಾಲ ರಸ್ತೆಗಳು ಇಲ್ಲದ ಕಡೆ ಭೂಮಿ ಒದಗಿಸಿದರೆ ಬೃಹದಾಕಾರದ ಬ್ಲೇಡುಗಳು ಮತ್ತು ಗೋಪುರಗಳನ್ನು ಸಾಗಿಸಲು ಸಾಧ್ಯವಾಗುವುದಿಲ್ಲ ಎಂದು ನನಗೆ ಪತ್ರ ಬರೆದು ಕೋರಿದ್ದರು’ ಎಂದಿದ್ದಾರೆ.

ಮೊದಲಿಗೆ ವಿಜಯಪುರ ಜಿಲ್ಲೆಯಲ್ಲಿ ಈ ಕಂಪನಿ ಬಂಡವಾಳ ಹೂಡಿಕೆಗೆ ಒಲವು ತೋರಿತ್ತು. ಆದರೆ ಅಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕೈಗಾರಿಕಾ ಪ್ರದೇಶವಿಲ್ಲ. ಕಂಪನಿಯು  ಎರಡು ಹಂತಗಳಲ್ಲಿ ಒಟ್ಟು 400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ತೀರ್ಮಾನಿಸಿದೆ. ಕುಷ್ಟಗಿ ತಾಲ್ಲೂಕಿನಲ್ಲಿ ಈಗಾಗಲೇ ಇದ್ದ ಕೆಐಎಡಿಬಿ ಭೂಮಿಯನ್ನೇ ಈಗ ಕೊಡಲಾಗುತ್ತಿದೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.

ಐನಾಕ್ಸ್‌ ವಿಂಡ್‌ ಕಂಪನಿಯು ಮೊದಲನೆಯ ಹಂತದಲ್ಲಿ 300 ಕೋಟಿ ರೂ. ಹೂಡಲಿದ್ದು ಬ್ಲೇಡುಗಳನ್ನು ತಯಾರಿಸಲಿದೆ. ಎರಡನೇಯ ಹಂತದಲ್ಲಿ 100 ಕೋಟಿ ರೂ. ಹೂಡಿಕೆಯೊಂದಿಗೆ ಗೋಪುರಗಳನ್ನು ಉತ್ಪಾದಿಸಲಿದೆ. ಈ ಯೋಜನೆಯಿಂದ ನೇರವಾಗಿ 1,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಕಂಪನಿಯು ಪವನ ವಿದ್ಯುತ್‌ ಕ್ಷೇತ್ರಕ್ಕೆ ಬೇಕಾಗುವ ಬಾನೆತ್ತರದ ಕಂಬಗಳನ್ನೂ ತಯಾರಿಸಲಿದೆ ಎಂದು ಅವರು ವಿವರಿಸಿದ್ದಾರೆ.

ಹೊಸ ಕೈಗಾರಿಕಾ ನೀತಿಯ ಅನ್ವಯ ಕೊಡುವ ಎಲ್ಲ ಸೌಲಭ್ಯಗಳನ್ನೂ ಐನಾಕ್ಸ್‌ ವಿಂಡ್‌ ಕಂಪನಿಗೂ ಕೊಡಲಾಗುವುದು. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೂ ಒಳ್ಳೆಯದಾಗಲಿದ್ದು, ಪ್ರಾದೇಶಿಕ ಅಸಮಾನತೆ ನಿವಾರಣೆಯತ್ತ ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ಎಂ.ಬಿ ಪಾಟೀಲ ಭರವಸೆ ವ್ಯಕ್ತಪಡಿಸಿದ್ದಾರೆ.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ENGLISH SUMMARY…

InoxWind to Invest ₹400 Crore in Kushtagi, Creating 1,000 Jobs: M. B. Patil

Bengaluru: InoxWind, a pioneer in manufacturing large blades and towers for the wind energy sector, is set to establish a new facility at the Kyadigoppa Industrial Area in Kushtagi taluk with an investment of ₹400 crore, generating around 1,000 direct jobs, announced Large and Medium Industries Minister M. B. Patil on Wednesday.

The Minister made this announcement after a meeting with Santosh Khairnar, President (Corporate Strategies) of InoxWind, to discuss the company’s plans. “The company’s Executive Director, Devansh Jain, had written to me requesting the allocation of 70 acres of land adjacent to the National Highway. He had explained that locating the unit in an area lacking wide, good-quality roads would not be viable for transporting massive blades and towers,” the Minister noted.

Initially, the company had shown interest in setting up its plant in Vijayapura district. However, due to the absence of an industrial area adjacent to the National Highway there, suitable land could not be identified. Consequently, land under the Karnataka Industrial Areas Development Board (KIADB) has been allocated for the project in Kushtagi taluk of Koppal district. Of the total ₹400 crore investment, ₹300 crore will be invested in the first phase and ₹100 crore in the second, Mr Patil explained.

The Minister assured that the State Government would extend full support and provide incentives to InoxWind under the new Industrial Policy. The proposed unit will manufacture wind turbine towers, including their massive blades and pillars. Mr Patil also expressed confidence that this project would play a significant role in addressing regional imbalance in industrial development across the State.

Key words: Inoxwind Company, invest, Rs 400 crore, Kushtagi district, Minister, M.B. Patil