ಬೆಂಗಳೂರು,ಸೆಪ್ಟಂಬರ್,27,2025 (www.justkannada.in): ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ವಿಪರೀತ ಸುಂಕ ಹಾಕುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಈಗ ಅವರು ನಮ್ಮ ಔಷಧೋತ್ಪನ್ನಗಳ ಮೇಲೂ ವಿಪರೀತ ಸುಂಕ ಏರಿದ್ದಾರೆ. ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ ಇದನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಸಲಹೆ ನೀಡಿದರು.
ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, ಚೀನಾ ಮತ್ತು ವಿಯಟ್ನಾಂ ಎರಡೂ ಉತ್ಪಾದನೆ ಹಾಗೂ ರಫ್ತಿನಲ್ಲಿ ನಮಗಿಂತ ಮುಂದಿವೆ. ಅವುಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವಾಗಿ ಶೇ.30 ಮತ್ತು ಶೇ 19ರಷ್ಟು ಮಾತ್ರ ಸುಂಕ ಹಾಕಿದ್ದಾರೆ. ಆದರೆ ಭಾರತದ ಉತ್ಪನ್ನಗಳ ಮೇಲೆ ಶೇ 50ರಷ್ಟು ಸುಂಕ ಹೇರಿದ್ದಾರೆ. ಇದರಿಂದ ನಮಗೆ ಹೊಡೆತ ಬೀಳುತ್ತಿರುವುದು ಸುಳ್ಳಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೋದ ಸಲ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಬ್ ಕೀ ಬಾರ್ ಟ್ರಂಪ್ ಎಂದು ಅವರ ಪರ ನೇರವಾಗಿ ಪ್ರಚಾರ ಮಾಡಿದ್ದರು. ಆದರೆ ಆಗ ಜೋ ಬೈಡನ್ ಗೆದ್ದರು. ಅವರೇನೂ ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಲಿಲ್ಲ. ಈ ಸಲ ಗೆದ್ದು ಬಂದ ಮೇಲೆ ಟ್ರಂಪ್ ಭಾರತದ ಮೇಲೆ ಅತಾರ್ಕಿಕವಾಗಿ ಸುಂಕ ವಿಧಿಸುತ್ತಿದ್ದು, ನಾವು ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗಿ ಬಂದಿದೆ. ಎಚ್1-ಬಿ ವೀಸಾ ಮೇಲೆ ವರ್ಷಕ್ಕೆ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸಿರುವುದು ಆಘಾತಕಾರಿಯಾಗಿದೆ. ಇಂತಹ ತೀರ್ಮಾನ ನಮ್ಮ ಐಟಿ ಸೇವೆಗಳು ಮತ್ತು ಎಫ್.ಡಿ.ಐ. ಮೇಲೆ ಕರಿನೆರಳನ್ನು ಸೃಷ್ಟಿಸುತ್ತಿದೆ. ಮೋದಿಯವರು ಇದನ್ನು ಬಗೆಹರಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಟ್ರಂಪ್ ಇದುವರೆಗೂ ನಮ್ಮ ಎಲೆಕ್ಟ್ರಾನಿಕ್ ಮತ್ತು ಫಾರ್ಮಾ ಉತ್ಪನ್ನಗಳಿಗೆ ಸುಂಕದಿಂದ ವಿನಾಯಿತಿ ನೀಡಿದ್ದರು. ಆದರೆ ಈಗ ಫಾರ್ಮಾ ಉತ್ಪನ್ನಗಳನ್ನೂ ಬಿಟ್ಟಿಲ್ಲ. ಇದು ಕೇವಲ ಕರ್ನಾಟಕದ ಮೇಲೆ ಮಾತ್ರವಲ್ಲ, ಇಡೀ ಭಾರತದ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಟ್ರಂಪ್ ಏನೇ ಮಾಡಲಿ, ನಾವು ದೇಶದ ಪರವಾಗಿದ್ದೇವೆ. ನಮ್ಮಲ್ಲಿ ಅಪಾರ ಪ್ರತಿಭೆ ಇದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯದಲ್ಲೇ ಎಂಎಸ್ ಐಎಲ್ ಚಿಟ್ ಫಂಡ್
ಸರಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ ಐಎಲ್) ವತಿಯಿಂದ ವಾರ್ಷಿಕ 10 ಸಾವಿರ ಕೋಟಿ ರೂಪಾಯಿ ವಹಿವಾಟು ಗುರಿಯುಳ್ಳ ಚಿಟ್ ಫಂಡ್ ವ್ಯವಹಾರವನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಎಂಎಸ್ ಐಎಲ್ ಸದ್ಯಕ್ಕೆ ವಾರ್ಷಿಕವಾಗಿ ಕೇವಲ 500 ಕೋಟಿ ರೂಪಾಯಿ ಮೊತ್ತದ ಚಿಟ್ ಫಂಡ್ ನಡೆಸುತ್ತಿದೆ. ಆದರೆ ಪಕ್ಕದ ಕೇರಳದಲ್ಲಿ ಅಲ್ಲಿನ ಸರಕಾರವು ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿ ಮೊತ್ತದ ಚಿಟ್ ಫಂಡ್ ನಡೆಸುತ್ತಿದೆ. ಎಂಎಸ್ಐಎಲ್ ಉಪಕ್ರಮವು ಸಂಪೂರ್ಣವಾಗಿ ಡಿಜಿಟಲ್ ಸ್ವರೂಪದಲ್ಲಿ ಇರಲಿದೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಉದ್ಘಾಟಿಸಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಅವರು ನುಡಿದಿದ್ದಾರೆ.
ಕಾಂತಾರ ಸಿನಿಮಾಕ್ಕೆ ಕೆಎಸ್ಡಿಎಲ್ ಸುಗಂಧ ಭಾಗಿದಾರ
ಒಂದು ಶತಮಾನದ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸೋಸಲೆ ಗರಳಪುರಿ ಶಾಸ್ತ್ರಿಗಳು ಸೇರಿಕೊಂಡು ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಆರಂಭಿಸಿದರು. ಈಗ ಸಂಸ್ಥೆಯು ‘ಕಾಂತಾರ- ಚಾಪ್ಟರ್ 1’ ಸಿನಿಮಾಕ್ಕೆ ಸುಗಂಧ ಭಾಗೀದಾರ ಆಗಿದೆ. ಇದರಿಂದ ಸಂಸ್ಥೆಯ ಉತ್ಪನ್ನಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಮಾರುಕಟ್ಟೆ ಸಿಗಲಿದೆ. ಜೊತೆಗೆ ಚಿತ್ರ ಬಿಡುಗಡೆ ಮಾಡುವ 30 ದೇಶಗಳಲ್ಲಿ ಸಂಸ್ಥೆಯ ಉತ್ಪನ್ನಗಳು ಜನರನ್ನು ತಲುಪಲಿವೆ. ಹೊಂಬಾಳೆ ಫಿಲಂಸ್ ಮತ್ತು ರಿಷಭ್ ಶೆಟ್ಟಿ ಅವರು ಈ ಸಂಬಂಧ ಕೆಎಸ್ಡಿಎಲ್ ಜತೆ ವ್ಯಾವಹಾರಿಕ ಆಸಕ್ತಿ ತೋರಿಸಿರುವುದು ಸಂತಸದ ಸಂಗತಿ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಕೆಎಸ್ ಡಿಎಲ್ ಈಗ 1,700 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ನಡೆಸುತ್ತಿದ್ದು, 415 ಕೋಟಿ ರೂಪಾಯಿ ಲಾಭ ಮಾಡಿದೆ. ಇದನ್ನು ಮುಂದಿನ ದಿನಗಳಲ್ಲಿ ವಾರ್ಷಿಕ 10 ಸಾವಿರ ಕೋಟಿ ರೂಪಾಯಿ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದ್ದಾರೆ.
ಕಾಂತಾರ ಸಿನಿಮಾ ಏಕಕಾಲದಲ್ಲಿ ದೇಶ ವಿದೇಶಗಳ 13,500 ತೆರೆಗಳಲ್ಲಿ ಪ್ರದರ್ಶನ ಕಾಣಲಿದೆ. ಕೆಎಸ್ಡಿಎಲ್ ಸಂಸ್ಥೆಯ ಮೂಲಕ ಕಳೆದ ಎರಡು ವರ್ಷಗಳಲ್ಲಿ 22 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈಗ ಕಾಂತಾರ ಸಿನಿಮಾಕ್ಕೆ ಸುಗಂಧ ಭಾಗೀದಾರ ಆಗುವ ಮೂಲಕ ಮಾರುಕಟ್ಟೆ ವಿಭಾಗವನ್ನು ಮತ್ತಷ್ಟು ಶಕ್ತಗೊಳಿಸಲಾಗುತ್ತಿದೆ ಎಂದು ಎಂ.ಬಿ ಪಾಟೀಲ್ ಬಣ್ಣಿಸಿದ್ದಾರೆ.
Key words: central government, resolve, tariff crisis, Minister, M.B. Patil