ಬೆಂಗಳೂರು,ಜೂನ್,19,2025 (www.justkannada.in): ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ರೀತಿಯ ಪರಿಷ್ಕರಣೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಈಗಾಗಲೇ ಏಪ್ರಿಲ್ ತಿಂಗಳ ಹಣ ಸಂದಾಯವಾಗಿದ್ದು, ಮೇ ತಿಂಗಳ ಹಣ ವರ್ಗಾವಣೆ ಆಗಬೇಕಿದೆ. ನಮಗೆ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಆಗಬೇಕಿದೆ. ನಮ್ಮ ಇಲಾಖೆಯ ಬದಲಾಗಿ ಈಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಮೂಲಕ ಹಣ ಸಂದಾಯವಾಗುತ್ತಿದೆ ಎಂದು ಹೇಳಿದರು.
ಹಣ ಸಂದಾಯಕ್ಕೆ ತಾಂತ್ರಿಕ ಸಮಸ್ಯೆ ಆಗುತ್ತಿದೆಯೇ ಎಂಬ ಪ್ರಶ್ನೆಗೆ, ಆತಂಹ ಸಮಸ್ಯೆ ಏನೂ ಇಲ್ಲ ಎಂದರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಳಜಿ ಇದೆ. ಯೋಜನೆಗೆ ಯಾವುದೇ ತೊಂದರೆ ಇಲ್ಲ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಮೂಲಕ ಹಣ ಸಂದಾಯವಾಗಬೇಕು ಎಂದು ಕೇಂದ್ರದ ನಿಯಮ ಇದೆ. ಹೀಗಾಗಿ ಫಲಾನುಭವಿಗಳಿಗೆ ಹಣ ತಲುಪಲು ಕೊಂಚ ವಿಳಂಬವಾಗುತ್ತಿದೆ ಎಂದು ತಿಳಿಸಿದರು
ಪ್ರತಿ ತಿಂಗಳು 10 ರಿಂದ 15 ಸಾವಿರ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿದೆ. ನೋಂದಣಿ ಮಾಡಿಕೊಂಡ ಎಲ್ಲಾ ಫಲಾನುಭವಿಗಳಿಗೆ ಹಣ ತಲುಪುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
Key words: no revision, Grihalakshmi Scheme, Minister, Lakshmi Hebbalkar