ಮಹಿಳೆಯರ ಸ್ವಾಭಿಮಾನ, ಸಮೃದ್ಧಿ, ತಾಳ್ಮೆ, ಶಕ್ತಿಯ ಪ್ರತೀಕವೇ ದಸರಾ ಹಬ್ಬ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮೈಸೂರು,ಸೆಪ್ಟಂಬರ್,23,2025 (www.justkannada.in): ಮಹಿಳೆಯರ ಸ್ವಾಭಿಮಾನ, ಸಮೃದ್ಧಿ, ತಾಳ್ಮೆ, ಶಕ್ತಿಯ ಪ್ರತೀಕವೇ ದಸರಾ ಹಬ್ಬ. ನವ ದೇವಿಯ ಆರಾಧನೆ ಮಾಡಿ. ದುಷ್ಟರ ವಿರುದ್ಧ ಶಿಷ್ಟರ ರಕ್ಷಣೆ ಮಾಡುವ ದೇವಿಯ ಆರಾಧನೆ ಮಾಡುವುದೇ ವಿಜಯ ದಶಮಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದರು.

ಇಂದು ನಾಡಹಬ್ಬ ದಸರಾ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ವತಿಯಿಂದ ನಗರದ ಜೆ. ಕೆ ಗ್ರೌಂಡ್ ನಲ್ಲಿ ಆಯೋಜಿಸಲಾಗಿದ್ದ, ಮಹಿಳಾ ದಸರಾವನ್ನು ಉದ್ಘಾಟಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿದರು.

ಇಡೀ ವಿಶ್ವಕ್ಕೆ ಸಂಸ್ಕೃತಿಯ ರುಚಿಯನ್ನು ಕೊಟ್ಟವರು ಮಹಿಳೆಯರು. ಸಾಂಸ್ಕೃತಿಕ ಪರಂಪರೆಯನ್ನು, ಸಂಸ್ಕೃತಿಯನ್ನು ಹಿಂದೆ ರಾಜರು ಆಳ್ವಿಕೆ ಮಾಡುತ್ತಿದ್ದರು. ಆದರೆ ಈಗ ಸರ್ಕಾರ ಬಹಳ ವಿಜೃಂಭಣೆಯಿಂದ ಆಚರಿಸುತ್ತಾ ಬರುತ್ತಿದೆ ಎಂದರು.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ಕಟ್ಟಿಕೊಡಬೇಕು, ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು, ಮಹಿಳೆಯರು  ಸ್ವಾವಲಂಬಿಯಾಗಿ ಜೀವಿಸಲು ಸಹಾಯ ಮಾಡಬೇಕು ಎಂಬ ಚಿಂತನೆಯನ್ನು ಇಟ್ಟುಕೊಂಡು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಹಿಳೆಯರನ್ನು ಕೇಂದ್ರೀಕೃತವಾಗಿ ಇಟ್ಟುಕೊಂಡು ಈ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಕೋಟ್ಯಾಂತರ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಮಹಿಳೆಯರು ಕೇವಲ ಅಡುಗೆ ಮನೆಗೆ, ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಅದರಿಂದ ಹೊರಬಂದು ಸ್ವಂತ ಜೀವನವನ್ನು ನಡೆಸುತ್ತಿದ್ದಾರೆ. ಮಹಿಳೆ ಸ್ವಾಭಿಮಾನದ ಸಂಕೇತ. ಸ್ವಾಭಿಮಾನದಿಂದ ಜೀವನ ನಡೆಸುತ್ತೇವೆ ಎಂಬ ಛಲ ತೊಟ್ಟು ಜೀವನವನ್ನು ನಡೆಸುತ್ತಾ ಇರುವವರು ಮಹಿಳೆಯರು. ಹೂ ಕಟ್ಟುವುದರಿಂದ ಹಿಡಿದು ಚಂದ್ರಯಾನಕ್ಕೆ ತಲುಪುವಂತಹ ಶಕ್ತಿಯನ್ನು ಹೊಂದಿರುವವರು ಮಹಿಳೆಯರು ಎಂದು ತಿಳಿಸಿದರು.

ಹಿಂದಿನ ಕಾಲದಲ್ಲಿ ಮಹಿಳೆ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿ ಜೀವಿಸುತ್ತಾ ಇರುವುದನ್ನು ನಾವು ನೋಡಿದ್ದೇವೆ ಆದರೆ ಈಗ ಕಾಲ ಬದಲಾಗಿದೆ. ತಮ್ಮ ಮನೆಯ ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಜೀವಿಸಬೇಕು ಎಂದು ಪುರುಷರು ಸಹ ಸಹಾಯ ಮಾಡುತ್ತಿದ್ದಾರೆ ಎಂದರೆ ನಿಜವಾಗಿಯೂ ಇಂದೊಂದು ಬದಲಾವಣೆಯ ಚಿಂತನೆಯೇ ಆಗಿದೆ. ಇಷ್ಟೇ ಅಲ್ಲದೇ ದೇಶದ ಸಾಹಿತ್ಯ ಇತಿಹಾಸಕ್ಕೆ ಮೆರುಗನ್ನು ತಂದುಕೊಟ್ಟ ಬಾನು ಮುಸ್ತಾಕ್ ಅವರು ದಸರಾ ಉದ್ಘಾಟನೆ ಮಾಡಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಸಂಸ್ಕೃತಿಯ ರಾಯಭಾರಿಯಾದ ಮಹಿಳೆಯರು ಜೀವನದ ಹೋರಾಟದಲ್ಲಿ ನಿಮ್ಮ ಆರೋಗ್ಯದ ಕಡೆಗೂ ಹೆಚ್ಚು ಗಮನ ಕೊಡಿ ನೀವು ಸಶಕ್ತರಾದರೆ ನಿಮ್ಮ ಕುಟುಂಬವು ಕೂಡ ಸಶಕ್ತವಾಗುತ್ತದೆ. ಆದ್ದರಿಂದ ಮಹಿಳೆಯರು ಆರೋಗ್ಯದ ಕಡೆ ಕಾಳಜಿ ವಹಿಸಿ ಎಂದು ಮಹಿಳೆಯರಿಗೆ ಸಲಹೆ ನೀಡಿದರು. ಈ ಸಂಧರ್ಭದಲ್ಲಿ ವಸ್ತು ಪ್ರದರ್ಶನ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಮಹಿಳೆಯರಿಗೆ ಶುಭಾ ಹಾರೈಸಿದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಅವರು ಮಾತನಾಡಿ ದೇಶದ ಶಕ್ತಿ ಎಂದರೆ ಮಹಿಳಾ ಶಕ್ತಿ, ಮಹಿಳೆ ಅಡುಗೆ ಮನೆಯಿಂದ ಹಿಡಿದು ಅಂತರಿಕ್ಷಕ್ಕೆ ಹಾರುವುದರ ಮೂಲಕ ಸಮಾನತೆಯನ್ನು ತೋರಿಸಿಕೊಟ್ಟಿದ್ದಾರೆ. ನಮ್ಮ ಪಂಚ ಗ್ಯಾರಂಟಿ ಯೋಜನೆಯ ಕಾರ್ಯಕ್ರಮಗಳು ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಿಕೊಡುವುದಾಗಿದೆ ಎಂದು ಹೇಳಿದರು.

ಮಹಿಳೆಯರಿಗೆ ಅರ್ಥಿವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಮಾನತೆ ಸಿಕ್ಕಿದೆ ಎಂದರೆ ಅದಕ್ಕೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರೇ ಕಾರಣ. ಮಹಿಳೆ ರಾಜಕೀಯಕ್ಕೆ ಬಂದರೆ ಸಮಾನತೆ ಸಾಧ್ಯ ಎಂಬ ಮಾತನ್ನು ಅಂಬೇಡ್ಕರ್ ಅವರು ಹೇಳಿದ್ದರು ಅದು ಇಂದು ಸಾಧ್ಯವಾಗಿದೆ ಎಂದರು.

ಮಹಿಳೆಯರು ನಾವೆಲ್ಲರೂ ಕಿತ್ತೂರು ರಾಣಿ ಚೆನ್ನಮ್ಮನಂತೆ ಆಗಬೇಕು, ಸಮಾಜದಲ್ಲಿ ಮುನ್ನುಗ್ಗಿ ಸಮಾನತೆಯನ್ನು ಸಾಧಿಸೋಣ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುವ ಮಾತಿನ ಹಾಗೆ ನಾವೆಲ್ಲರೂ ಒಗ್ಗಟ್ಟಿನಿಂದ ಮುಂದೆ ಸಾಗೋಣ ಎಂದರು.

ಈ ಬಾರಿ ವಿಶೇಷವಾಗಿ ಮೇಳದಲ್ಲಿ ಪ್ರಕೃತಿ ಗಿರಿಜನ ಒಕ್ಕೂಟ, ಚಾಮುಂಡೇಶ್ವರಿ ಶ್ರೀ ಶಕ್ತಿ ಸಂಘ, ಆರ್ , ಎಲ್, ಹೆಚ್, ಪಿ ಧ್ವನಿ ಮಹಿಳಾ ಒಕ್ಕೂಟ, ವೈಭವ ಲಕ್ಷ್ಮಿ ಸ್ವ ಸಹಾಯ ಸಂಘ ಧನಲಕ್ಷ್ಮಿ ಸ್ತ್ರೀ ಶಕ್ತಿ ಮಹಿಳಾ ಸಂಘ, ಮೈಸೂರು, ಮಕ್ಕಾ ಮಸೀದಿ ಸ್ತ್ರೀ ಶಕ್ತಿ ಸಂಘ, ಶ್ರೀ ಚಿಕ್ಕಮ್ಮ ಸ್ತ್ರೀ ಶಕ್ತಿ ಸಂಘ ಸೇರಿಂದಂತೆ 35 ಕ್ಕೂ ಹೆಚ್ಚು ಮಳಿಗೆಗಳು ತಲೆ ಎತ್ತಿದ್ದವು. ಬಿದಿರು ಕರಕುಶಲ ಕೈಗಾರಿಕೆ, ಮಣ್ಣಿನ ಕರಕುಶಲ ವಸ್ತುಗಳು, ತೊಗಲು ಗೊಂಬೆಗಳು, ಮಕ್ಕಳ ಆಟಿಕೆಗಳು, ಬಟ್ಟೆ , ಸೀರೆ ಮಾರಾಟ, ಮಹಿಳಾ ಆಭರಣಗಳು, ಪೇಂಟಿಂಗ್ ಗಳು, ಚುರುಮುರಿ, ಪಾನಿಪುರಿ, ಕಜ್ಜಾಯ ಇನ್ನಿತರ ತಿಂಡಿ ತಿನಿಸುಗಳು, ಸೇರಿದಂತೆ ಸ್ತ್ರೀ ಸ್ವಾವಲಂಬನೆ ಸಾರುವ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಅಧ್ಯಕ್ಷರಾದ ಮಲ್ಲಿಗೆ ವೀರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಮಹೇಶ್ ಬಾಬು, ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಗಳು ಹಾಗೂ ದಸರಾ ಉಪ ಸಮಿತಿಯ  ವಿಶೇಷಾಧಿಕಾರಿಗಳಾದ ಬಿ.ಎಂ ಸವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷರಾದ ಬಿ. ಬಸವರಾಜು, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಉಪಾಧ್ಯಕ್ಷರಾದ ಲತಾ ಮೋಹನ್ ರಾಯ್ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Key words: Dasara, symbol, women, self-respect, patience, Minister, Lakshmi Hebbalkar