Friday, October 2, 2026

BDA Apartments

Mysore dasara BDA JK_Adv BDA Adv
Home Front Page ರಾಜ್ಯಪಾಲರ ಭಾಷಣ ಯಶಸ್ವಿ ಸರ್ಕಾರದ ಯಶೋಗಾಥೆ- ಸಚಿವ ಈಶ್ವರ್ ಖಂಡ್ರೆ

ರಾಜ್ಯಪಾಲರ ಭಾಷಣ ಯಶಸ್ವಿ ಸರ್ಕಾರದ ಯಶೋಗಾಥೆ- ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು, ಮಾರ್ಚ್,3, 2025 (www.justkannada.in): ರಾಜ್ಯಪಾಲರು ಉಭಯ ಸದನ ಉದ್ದೇಶಿಸಿ ಇಂದು ಮಾಡಿದ ಭಾಷಣ ಯಶಸ್ವೀ ಸರ್ಕಾರದ ಯಶೋಗಾಥೆಯಾಗಿದೆ  ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ  ಈಶ್ವರ್ ಖಂಡ್ರೆ ಹೇಳಿದ್ದಾರೆ.

ರಾಜ್ಯಪಾಲರ ಭಾಷಣ ಕುರಿತು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ಅವರು, ಇದು ಸರ್ಕಾರದ ಸಾಧನೆಗಳನ್ನು ಸಮರ್ಥವಾಗಿ ತೆರೆದಿಟ್ಟಿರುವುದಲ್ಲದೇ, ಹೊಸ ಯೋಜನೆಗಳ ಮೂಲಕ ರಾಜ್ಯದ  ಅಭಿವೃದ್ಧಿಗೆ ದಿಕ್ಸೂಚಿಯಾಗಿದೆ ಎಂಬುದನ್ನು ಭಾಷಣ ಸ್ಪಷ್ಟವಾಗಿ ಸಾರಿದೆ ಎಂದು ಹೇಳಿದ್ದಾರೆ.

ಗ್ಯಾರಂಟಿಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಿಂದ ಅಸಮಾನತೆ ತಗ್ಗಿದ್ದರೆ, ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕ ರಾಜ್ಯ ಮಾಡುವ ನಿಟ್ಟಿನಲ್ಲಿ ಸಮಗ್ರ ಹಾಗೂ ಸಮರ್ಥ ಪ್ರಯತ್ನ ಮಾಡುವ ಸಂಕಲ್ಪ ರಾಜ್ಯದ ಜನರಲ್ಲಿ ಮತ್ತು ಹೂಡಿಕೆದಾರರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂದು ಖಂಡ್ರೆ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಪ್ರಾದೇಶಿಕ ಅಸಮತೋಲದಿಂದ ನಲುಗಿವೆ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು 2002ರಲ್ಲಿ ರಚಿಸಲಾಗಿದ್ದ ಡಾ. ಡಿ.ಎಂ. ನಂಜುಂಡಪ್ಪ ವರದಿ ಆಧರಿಸಿ ಈವರೆಗೆ 37,662 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ವೆಚ್ಚ ಮಾಡಿದ ಸಂಪನ್ಮೂಲದ ಪರಿಣಾಮ ಹಾಗೂ ಮುಂದುವರಿದ ಪ್ರಾದೇಶಿಕ ಅಸಮತೋಲನ ಕುರಿತು ಅಧ್ಯಯನ ಮಾಡಲು ನೇಮಕ ಮಾಡಲಾಗಿರುವ ಸಮಿತಿ ನೀಡುವ ವರದಿ ಆಧರಿಸಿ ಅಭಿವೃದ್ಧಿಗೆ ಮುಂದಾಗುವುದಾಗಿ ಘೋಷಿಸಿರುವುದು ಉತ್ತಮ ನಡೆಯಾಗಿದೆ.

ವಸತಿ ಸಮಸ್ಯೆಯ ಪರಿಹಾರಕ್ಕೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ, ಯುವಜನರ ಕೌಶಲ್ಯಾಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆಯೂ ಭಾಷಣದಲ್ಲಿ ಪ್ರಸ್ತಾಪಿಸಲಾಗಿದ್ದು, ಇದೆಲ್ಲವೂ ಯುವ ಜನರಲ್ಲಿ ಹೊಸ ಚೈತನ್ಯ ಮೂಡಿಸುವುದರ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರಣ್ಯ ಇಲಾಖೆಯ ಸಾಧನೆ ಪ್ರಸ್ತಾಪಕ್ಕೆ ಸಂತಸ:

ರಾಜ್ಯಪಾಲರ ಭಾಷಣದಲ್ಲಿ ಅರಣ್ಯ, ಪರಿಸರ ಇಲಾಖೆಯ ಕಾರ್ಯಸಾಧನೆಯ ಪ್ರಸ್ತಾಪ ಸಂತಸ ತಂದಿದೆ. ಅರಣ್ಯ ಒತ್ತುವರಿ ತೆರವು, ಹೊಸ ಅರಣ್ಯ ಪ್ರದೇಶದ ಸೇರ್ಪಡೆ, ಬೆಂಗಳೂರಿನಲ್ಲಿ ಹೊಸದಾಗಿ 153 ಎಕರೆ ಪ್ರದೇಶದಲ್ಲಿ ಬೃಹತ್ ಉದ್ಯಾನ ನಿರ್ಮಾಣ, ಬೆಂಗಳೂರು ನಗರದಲ್ಲಿ ಹಸಿರು ವಲಯ ಸಂರಕ್ಷಿಸಲು ಮತ್ತು ಪಕ್ಷಿಗಳ ನೆಲೆ ಕಾಪಾಡಲು 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವುದನ್ನೂ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರುವುದು ಪರಿಸರ ಸಂರಕ್ಷಣೆಯ ತಮ್ಮ ಕಾರ್ಯಕ್ಕೆ ಮತ್ತಷ್ಟು ಸ್ಫೂರ್ತಿ ತಂದಿದೆ ಎಂದು  ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

Key words: Governor, speech, successful government, Minister, Ishwar Khandre