ಮೈಸೂರು, ಅಕ್ಟೋಬರ್, 27,2025 (www.justkannada.in): ಸರಗೂರು ತಾಲೂಕು ಬೆಣ್ಣೆಗೆರೆ (ಮುಳ್ಳೂರು) ಬಳಿ ನಿನ್ನೆ ನಡೆದ ಹುಲಿ ದಾಳಿ ತೀವ್ರ ನೋವು ತಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದ ಸಚಿವ ಈಶ್ವರ್ ಖಂಡ್ರೆ ಅವರು ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ, ನಿನ್ನೆ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹುಲಿಯ ಓಡಾಟದ ಬಗ್ಗೆ ದೂರು ಬಂದಿದ್ದರೂ ಬೋನು ಇಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರೆ, ಎಚ್.ಡಿ. ಕೋಟೆ, ಸರಗೂರಿನಲ್ಲೇ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ಇದ್ದರೂ, ಮೈಸೂರಿಗೆ ಏಕೆ ತಂದರು ಎಂಬ ಬಗ್ಗೆ ತನಿಖೆ ಮಾಡಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಮಾನವ ವನ್ಯಜೀವಿ ಸಂಘರ್ಷ ಇಂದು ನಿನ್ನೆಯದಲ್ಲ ಹಿಂದಿನಿಂದಲೂ ಇದೆ. ಅರಣ್ಯದಂಚಿನ ಗ್ರಾಮದ ಜನರು ವನ್ಯ ಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಸರಗೂರು ಬಳಿ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಮೃತದೇಹವನ್ನು ಮೈಸೂರಿಗೆ ತಂದಿರುವ ವಿಚಾರ ತಮಗೆ ಮೈಸೂರಿಗೆ ಬರುವ ಮಾರ್ಗದಲ್ಲಿ ತಿಳಿಯಿತು. ಅಂತಿಮ ನಮನ ಸಲ್ಲಿಸಲು ಬಂದಿದ್ದೇನೆ. ಮೈಸೂರಿಗೆ ಏಕೆ ಪಾರ್ಥೀವ ಶರೀರ ತಂದಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
Key words: Man dies, tiger attack, Action, negligence, Minister, Ishwar Khandre







