ಬೆಂಗಳೂರು,ಆಗಸ್ಟ್,30,2025 (www.justkannada.in): ಅಭಿಮಾನ್ ಸ್ಟುಡಿಯೋ ಜಾಗ ಅರಣ್ಯ ಇಲಾಖೆಗೆ ಸೇರಬೇಕು. 10 ಎಕರೆ ಜಾಗವನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡು ಅರಣ್ಯ ಇಲಾಖೆಗೆ ನೀಡಬೇಕಿದೆ. ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಇಂದು ವಿಷ್ಣುಸೇನೆ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ವಿಷ್ಣುವರ್ಧನ್ ಸಮಾಧಿ ನಿರ್ಮಾಣಕ್ಕೆ ಅಭಿಮಾನ್ ಸ್ಟುಡಿಯೋನಲ್ಲಿ ಜಾಗ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಬಳಿಕ ಮಾತನಾಡಿದ ಸಚಿವ ಈಶ್ವರ ಖಂಡ್ರೆ, 1970 ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಕಂದಾಯ ಇಲಾಖೆಯ ಮೂಲಕ ಸ್ಟುಡಿಯೋ ನಿರ್ಮಾಣಕ್ಕಾಗಿ ಬಾಲಣ್ಣ ಅವರಿಗೆ ನೀಡಲಾಗಿತ್ತು. ಆ ಸಮಯದಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಆ ಷರತ್ತುಗಳನ್ನು ಪಾಲಿಸದೇ ಉಲ್ಲಂಘನೆ ಮಾಡಲಾಗಿದ್ದು, ಈಗ ಪ್ರತಿ ಎಕರೆಗೆ 14.37 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಸಹ ಷರತ್ತಿನ ಉಲ್ಲಂಘನೆಯಾಗಿದೆ. ಹೀಗಾಗಿ ಆ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಒಪ್ಪಿಸಬೇಕೆಂದು ನಾವು ಈಗಾಗಲೇ ಕಂದಾಯ ಇಲಾಖೆಗೆ ಕೇಳಿದ್ದೇವೆ ಎಂದರು.
ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅದೇ ಹತ್ತು ಎಕರೆಯಲ್ಲಿ ಜಾಗ ನೀಡುವಂತೆ ಮನವಿ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ‘ವಿಷ್ಣುವರ್ಧನ್ ಅವರು ಎಲ್ಲರ ಮೆಚ್ಚಿನ ನಟ, ಅವರ ಬಗ್ಗೆ ನಮಗೆ ಅಪಾರ ಗೌರವ ಇದೆ. ಈಗ ಶ್ರೀನಿವಾಸ್ ಅವರು ಜಾಗ ಕೇಳಿದ್ದಾರೆ. ಈ ವಿಷಯವನ್ನು ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುತ್ತೇನೆ ಎಂದರು.
Key words: Abhiman Studio, land, Forest Department, Minister, Ishwar Khandre