ಬೆಂಗಳೂರು,ಆಗಸ್ಟ್,25,2025 (www.justkannada.in): ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆ ಬಗ್ಗೆ ಬಿಜೆಪಿ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಹೆಚ್.ಸಿ ಮಹದೇವಪ್ಪ, ದಸರಾ ಉದ್ಘಾಟನೆಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಮತ್ತು ಹಲವು ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದರ ಬಗ್ಗೆ ಬಿಜೆಪಿಗರು ಆಕ್ಷೇಪ ವ್ಯಕ್ತಪಡಿಸಿರುವುದು ಅತ್ಯಂತ ಬೇಸರದ ಸಂಗತಿ. ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅಹ್ವಾನ ನೀಡಿದರೇ ಏನು ತಪ್ಪು . ಅವರ ಆಯ್ಕೆಯನ್ನು ಗೌರವಿಸಬೇಕು ಎಂದಿದ್ದಾರೆ.
ಯುಗಾದಿಗೆ ನಮ್ಮ ಮನೆಗೆ ಹೋಳಿಗೆ ಊಟಕ್ಕೆ ಅವರು ಬರುತ್ತಾರೆ. ಬಕ್ರಿದ್ ಹಬ್ಬ ಮಾಡಿದಾಗ ನಾವು ಬಿರಿಯಾನಿ ತಿನ್ನೋಕೆ ಹೋಗುತ್ತೇವೆ. ಈ ವಿಚಾರದಲ್ಲಿ ಯಾಕೆ ತಾರತಮ್ಯ ಮಾಡುತ್ತಿರಿ. ದಸರಾ ಮಹೋತ್ಸವ ಸಾಂಸ್ಕೃತಿಕವಾಗಿ ನಾಡಹಬ್ಬ ಸಹಜವಾಗಿ ಚಾಮುಂಡೇಶ್ವರಿಯಲ್ಲಿ ಜನ ನಂಬಿಕೆ ಇಟ್ಟಿದ್ದಾರೆ ದಸರಾ ಉದ್ಘಾಟನೆ ಸಾಹಿತಿ ಬಾನು ಮುಷ್ತಾಕ್ ಅವರ ಬದಲಾವಣೆ ಮಾಡುವ ಚಿಂತನೆ ಇಲ್ಲ ಎಂದು ಸಚಿವ ಮಹದೇವಪ್ಪ ಸ್ಪಷ್ಟಪಡಿಸಿದರು.
ಬೂಕರ್ ಪ್ರಶಸ್ತಿಯ ಮೂಲಕ ಕನ್ನಡ ನಾಡಿನ ಕಂಪನ್ನು ವಿಶ್ವದೆಲ್ಲೆಡೆ ಹಬ್ಬುವ ಕೆಲಸ ಮಾಡಿರುವ ಬಾನು ಮುಷ್ತಾಕ್ ಅವರನ್ನು ಈ ನಾಡಿನ ಪ್ರಜೆಗಳಾಗಿ ಬಿಜೆಪಿಗರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಗೌರವಿಸಬೇಕಿತ್ತು. ಆದರೆ ತಲೆಯಲ್ಲಿ ಮನುವಾದಿಗಳ ವಿಷ ತುಂಬಿಕೊಂಡಿರುವ ಬಿಜೆಪಿಗರು ಮುಸ್ಲೀಮರ ಹೆಸರು ಕಂಡರೆ ಸಾಕು, ಅವರನ್ನು ಕಾರಣವಿಲ್ಲದೆಯೇ ದ್ವೇಷ ಮಾಡುವ ತಮ್ಮ ಕೆಟ್ಟ ನೀತಿಯನ್ನು ಮುಂದುವರೆಸಿದ್ದಾರೆ.
ದಸರಾ ಎಂಬುದು ನಾಡಹಬ್ಬ ಎಂಬ ಸಣ್ಣ ಸಂಗತಿಯನ್ನು ಮರೆತು, ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿರುವ ಬಿಜೆಪಿಗರು ನಾಡು ನುಡಿಗೆ ಕೊಡುಗೆ ನೀಡಿದವರನ್ನು ಅವಮಾನಿಸುವ ಕೆಲಸವನ್ನು ಮೊದಲು ನಿಲ್ಲಿಸಲಿ. ಧರ್ಮವನ್ನು ರಾಜಕೀಯದಲ್ಲಿ ಬೆರೆಸಬಾರದೆಂಬ ಸಣ್ಣ ಅರಿವನ್ನು ಬಿಜೆಪಿಯೊಳಗೆ ಅಳಿದುಳಿದಿರುವ ಕೆಲವರಾದರೂ ವಿಚಾರವಂತರು ತಮ್ಮ ಪಕ್ಷದ ಮುಖಂಡರಿಗೆ ತಿಳಿಸಲಿ ಎಂದು ಹೇಳಿದರು.
ಭಾರತೀಯ ಜನಗಳಾದ ನಾವು ಐಕ್ಯತೆಯಿಂದ ಇರಬೇಕೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಬಿಜೆಪಿಗರು ತಮ್ಮ ಈ ಮುಸ್ಲಿಂ ದ್ವೇಷದ ಮನಸ್ಥಿತಿಯನ್ನು ಬದಿಗಿಟ್ಟು ಸಂವಿಧಾನದ ಆಶಯವನ್ನು ಅರ್ಥ ಮಾಡಿಕೊಳ್ಳಲಿ ಎಂದರು.
Key words: Banu Mushtaq, inauguration, Dasara, Minister, HC Mahadevappa