ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಜನಸ್ಪಂದನ ಆಯೋಜನೆ-ಸಚಿವ ಹೆಚ್ ಸಿ ಮಹದೇವಪ್ಪ

ಮೈಸೂರು,ಜುಲೈ,4,2025 (www.justkananda.in): ಮೂರು ತಿಂಗಳಿಗೆ ಒಂದು ಬಾರಿ ಕೆ.ಡಿ.ಪಿ ಸಭೆ ಹಾಗೂ 6 ತಿಂಗಳಿಗೆ ಒಂದು ಬಾರಿ ಜನತಾದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ. ಹಿಂದೆ ಮಾಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದಿದ್ದ ಮನವಿಗಳಲ್ಲಿ ಎಷ್ಟು ಪರಿಹಾರ ಮಾಡಲಾಗಿದೆ ಎಂಬುದನ್ನು ತಿಳಿಸಬೇಕು. ಕಾನೂನು ತೊಡಕು ಇರುವ ಅರ್ಜಿಗಳ ಬಗ್ಗೆಯೂ ಅರ್ಜಿದಾರರಿಗೆ ಮಾಹಿತಿ ನೀಡಬೇಕು. ಜನರಿಗೆ ಪಾರದರ್ಶಕ ಆಡಳಿತದ ಬಗ್ಗೆ ಮಾಹಿತಿ ನೀಡಬೇಕು. ಜನರ ಸಮಸ್ಯೆಗಳನ್ನು ಪರಿಹರಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ ಅವರು ಹೇಳಿದರು.

ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ‘ಜಿಲ್ಲಾ ಮಟ್ಟದ ಜನಸ್ಪಂದನ’ ಹಾಗೂ ಇ– ಪೌತಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 200 ಕ್ಕಿಂತ ಅಧಿಕ ಜನರ ಅಹವಾಲು ಸ್ವೀಕರಿಸಲಾಯಿತು. ಕಳೆದ ಬಾರಿ 113 ಅರ್ಜಿಗಳು ಬಂದಿದ್ದವು ಎಂದು ತಿಳಿಸಿದರು.

ಯಾವ ಯಾವ ಇಲಾಖೆಗಳಲ್ಲಿ ಏನೇನು ಸಮಸ್ಯೆಗಳಿವೆ ಎಷ್ಟು ಅರ್ಜಿಗಳು ಬಂದಿದೆ. ಎಷ್ಟು ಅರ್ಜಿಗಳಿಗೆ ಪರಿಹಾರ ಮಾಡಲಾಗಿದೆ, ಮಾಡದೆ ಇರುವಂತಹ ಅರ್ಜಿಗಳಿಗೆ ಏನು ಪರಿಹಾರ ಎಂಬ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅರ್ಜಿದಾರರು ತಿಳಿಸಿರುವ ಸಮಸ್ಯೆ ಪರಿಹರಿಸಲು ಆಡಳಿತ ಯಾವಾಗಲೂ ಜನರ ಜೊತೆಯೇ ಇರುತ್ತದೆ ಎಂದು ಹೇಳಿದರು.

ಕಾನೂನಾತ್ಮಕವಾಗಿ ಪರಿಹಾರ ಮಾಡಲು ಸಾಧ್ಯವಾಗಿದೆ ಇರುವಂತಹ ಕಾರ್ಯಗಳ ಬಗ್ಗೆ ಮನವರಿಕೆ ಮಾಡಲು ಆಡಳಿತ ಜನರ ಜೊತೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಹಾಗೂ ನಿಮ್ಮ ಜೊತೆಯಲ್ಲಿ ಕಚೇರಿಯ ಸಮಸ್ಯೆಯನ್ನು ಪರಿಹರಿಸಲು ಸಹಾಯವಾಗುತ್ತದೆ. ಜನರು ಮತ್ತು ಜಿಲ್ಲಾಡಳಿತ ನಡುವೆ ನೇರ ಸಂಪರ್ಕ ಇರುತ್ತದೆ. ಮಧ್ಯವರ್ತಿಗಳ ಹಾವಳಿಗಳನ್ನು ತಪ್ಪಿಸುವ ಸಲುವಾಗಿ ಪ್ರತಿ ಆರು ತಿಂಗಳಿಗೆ ಕಡ್ಡಾಯವಾಗಿ ಜನ ಸಂಪರ್ಕ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಜನಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರ ಸಮಸ್ಯೆ ಆಲಿಸಿದ ಸಚಿವರು ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವ ಭರವಸೆ ನೀಡಿದರು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಹುಡುಕಿದ ಸಚಿವರು, ಇನ್ನುಳಿದ ಅಹವಾಲುಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಯೊಬ್ಬರಿಂದಲೂ ಮನವಿ ಸ್ವೀಕರಿಸಿ ಅದನ್ನು ದಾಖಲು ಮಾಡಿಕೊಳ್ಳಲಾಯಿತು ಹಾಗೂ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಲಾಯಿತು.

ಬೀದಿ ಬದಿ ವ್ಯಾಪಾರಿಗಳು, ಅಂಗವಿಕಲರು, ಕೂಲಿ ಕಾರ್ಮಿಕರು ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಅವರೆಲ್ಲರ ಅರ್ಜಿಯನ್ನು ಸಂಗ್ರಹಿಸಿದ್ದು, ಬಹು ವಸತಿ ಸೌಲಭ್ಯ ಒದಗಿಸಲು ಕ್ರಮವಹಿಸಲಾಗುವುದು. ಎಲ್ಲರಿಗೂ ಸೂರು ಒದಗಿಸಲು ಯೋಜನೆ ರೂಪಿಸುತ್ತೇವೆ. ಆರ್ಥಿಕವಾಗಿ ಹಿಂದುಳಿದ ಹಲವರು ಸೌಲಭ್ಯ ದೊರಕುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ರೀತಿ ಸಮಸ್ಯೆ ಇರುವವರನ್ನು ವಿಚಾರಿಸಿ ಅಧಿಕಾರಿಗಳು ಅವರಿಗೆ ಎಲ್ಲಾ ಸೌಲಭ್ಯ ಒದಗಿಸಿಕೊಡಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ, ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್.ವಿಷ್ಣುವರ್ಧನ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ.ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.vtu

Key words: Organization, Janaspandana, people, problems, Minister, HC Mahadevappa