ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಲು ಆಗ್ರಹ- ಸಚಿವ ಹೆಚ್.ಕೆ ಪಾಟೀಲ್

ಬೆಂಗಳೂರು,ಮೇ,3,2025 (www.justkannada.in): ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519 ಮೀಟರನಿಂದ 524.256 ವರೆಗೆ ಎತ್ತರಿಸಲು ಕಾನೂನಾತ್ಮಕವಾಗಿ ಯಾವುದೇ ತೊಡಕುಗಳು ಇಲ್ಲದೇ ಇರುವುದರಿಂದ ಅಣೆಕಟ್ಟೆಯ ಎತ್ತರವನ್ನು ಹೆಚ್ಚಳ ಮಾಡಬೇಕೆಂದು ಉತ್ತರ ಕರ್ನಾಟಕದ ಸಚಿವರು ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದೇವೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ತಿಳಿಸಿದರು.

“ಕೃಷ್ಣಾ ನ್ಯಾಯಾಧೀಕರಣ-2ರ ಗೆಜೆಟ್ ಅಧಿಸೂಚನೆ” ಕೇಂದ್ರ ಜಲಸಂಪನ್ಮೂಲ ಸಚಿವರು ಕಣಿವೆ ರಾಜ್ಯಗಳ ಜಲಸಂಪನ್ಮೂಲ ಸಚಿವರ ಜೊತೆಗೆ ದಿನಾಂಕ: 07.05.2025 ರಂದು ಕರೆದಿರುವ ಸಭೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಇಂದು ತಮ್ಮ ನಿವಾಸದಲ್ಲಿ ಕರೆದ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸಲು ಯಾವುದೇ ಕಾನೂನಿನ ತೊಡಕುಗಳಿಲ್ಲವೆಂದು ಕಾನೂನು ತಜ್ಞರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಗೇಟ್ ಅಳವಡಿಸಲು ಯಾವುದೇ ತೊಡಕು ಇಲ್ಲವೆಂದು ಕಾವೇರಿ ಐತೀರ್ಪು ಮತ್ತು ಮಹದಾಯಿ ಐತೀರ್ಪುಗಳು ಗೆಜೆಟ್ ಅಧಿಸೂಚನೆ ಹೊರಡಿಸಿದಂತೆ ಕೃಷ್ಣಾ ಜಲವಿವಾದ ನ್ಯಾಯಾಧೀಕರಣ-2 ಬ್ರಿಜೇಶ್ ಕುಮಾರ ಆಯೋಗದ ಐತೀರ್ಪನ್ನು ಸಹ ಗೆಜೆಟ್ ಪ್ರಕಟಣೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತೆಂದು ತಿಳಿಸಿದರು.

ಕೃಷ್ಣಾ ಜಲವಿವಾದ ನ್ಯಾಯಾಧೀಕರಣ-2ರ ಐತೀರ್ಪು ಪ್ರಕಟವಾಗಿ 15 ವರ್ಷಗಳು ಗತಿಸಿವೆ. ಐತೀರ್ಪಿನ ಅವಧಿ 40 ವರ್ಷದ್ದಾಗಿದೆ. ಹೀಗೆಯೇ ಇನ್ನೈದು ವರ್ಷ ಕಳೆದರೆ ಐತೀರ್ಪು ಅನುಷ್ಠಾನದ ಅರ್ಧ ಅವಧಿ ಪೂರ್ಣಗೊಳ್ಳುತ್ತದೆ. ಬಾಕಿ ಉಳಿದ ಅವಧಿಯಲ್ಲಿ ಕರ್ನಾಟಕ ತನ್ನ ಹಕ್ಕಿನ ನೀರನ್ನು ಬಳಸಿಕೊಳ್ಳುವಲ್ಲಿ ಯಾವುದೇ ರೀತಿಯಲ್ಲಿ ನ್ಯಾಯ ದೊರಕಿಸಿದಂತಾಗುವುದಿಲ್ಲ ಎಂದು ಸಚಿವ ಎಚ್.ಕೆ ಪಾಟೀಲ್ ಹೇಳಿದರು.

ರೈತರ ಹೊಲಗಳಿಗೆ ಹರಿಯಬೇಕಾದ ನೀರು ಸಮುದ್ರಕ್ಕೆ ಹರಿದು ವ್ಯರ್ಥವಾಗುತ್ತಿದೆ. 16 ಸಾವಿರ ಕೋಟಿ ರೂಪಾಯಿಯ ಬಂಡವಾಳ ಹೂಡಿ ಕೃಷ್ಣಾ ಮೇಲ್ದಂಡೆ ಯೋಜನೆ-3 ಅಡಿಯಲ್ಲಿ ಕಾಲುವೆ ಜಾಲ ನಿರ್ಮಾಣ ಮಾಡಲಾಗಿದೆ. ಆದರೆ, ಈ ಕಾಲುವೆಯ ಜಾಲ ವ್ಯರ್ಥವಾಗುತ್ತಿದೆ ಎಂದು ತಿಳಿಸಿದರು. ಕರ್ನಾಟಕದ ನ್ಯಾಯಯುತ ಹಕ್ಕಿಗೆ ಕೇಂದ್ರ ಸರ್ಕಾರ ಕೊಡಲಿಪೆಟ್ಟು ಹಾಕಿ ರಾಜ್ಯದ ಹಕ್ಕನ್ನು ನಿರಾಕರಿಸಿ ಕೆಳದಂಡೆ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಕರ್ನಾಟಕದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತಿದೆ ಎಂದು ಆರೋಪಿಸಿದರು.

ಪ್ರವಾಹ ಪರಿಸ್ಥಿತಿಯು ಸಹ ನಮ್ಮನ್ನು ಬಾಧಿಸುತ್ತಿದ್ದು, ಕಳೆದ 5 ವರ್ಷಗಳಲ್ಲಿ ಐದೂ ವರ್ಷವು ಪ್ರವಾಹದಿಂದ ಕೃಷ್ಣಾ ನದಿ ಪಾತ್ರದ ಬಹುತೇಕ ಭಾಗ ಪ್ರವಾಹಪೀಡಿತವಾಗಿ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಪ್ರವಾಹ ನಿರ್ವಹಣೆಗಾಗಿ ನಾವು ಈ ನೀರನ್ನು ಕಾಲುವೆಗೆ ಹರಿಸಿಕೊಳ್ಳಬಹುದು ಎಂಬ ರಚನಾತ್ಮಕ ಸಲಹೆಯನ್ನು ಸಭೆಯಲ್ಲಿ ನೀಡಿರುವುದಾಗಿ  ಹೆಚ್.ಕೆ ಪಾಟೀಲ್ ತಿಳಿಸಿದರು.

ಈ ಸಭೆಯಲ್ಲಿ ಉತ್ತರ ಕರ್ನಾಟಕದ ಸಚಿವರಾದ ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್ ಮತ್ತು ಆರ್.ಬಿ ತಿಮ್ಮಾಪೂರ ಹಾಗೂ ಶರಣಬಸಪ್ಪ ದರ್ಶನಾಪೂರ ಅವರು ಉಪಸ್ಥಿತರಿದ್ದು, ಸರ್ವಾನುಮತದಿಂದ ಉತ್ತರ ಕರ್ನಾಟಕದ ಹಿತರಕ್ಷಣೆಯ ಬಗ್ಗೆ ಮಾತನಾಡಿದರು ಎಂದು ಸಚಿವ ಎಚ್.ಕೆ ಪಾಟೀಲ್ ತಿಳಿಸಿದರು.

Key words: Demand,  increase, height, Almatti Dam, Minister, H.K. Patil