ಉದ್ಯೋಗಾಧರಿತ ಶಿಕ್ಷಣಕ್ಕೆ ಸರ್ಕಾರದಿಂದ ಹೆಚ್ಚು ಒತ್ತು-ಸಚಿವ ಡಾ: ಎಂ.ಸಿ ಸುಧಾಕರ್

ಮೈಸೂರು,ಜನವರಿ,5,2026 (www.justkannada.in):  ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗಾಧರಿತ ಶಿಕ್ಷಣ ನೀಡಲು ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ: ಎಂ.ಸಿ.ಸುಧಾಕರ್ ಅವರು ತಿಳಿಸಿದರು.

ಇಂದು ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಡಾ.ಎಂ.ಸಿ ಸುಧಾಕರ್,  ಕೌಶಲ್ಯಾಧರಿತ ತರಬೇತಿ ನೀಡಿ ಉದ್ಯೋಗ ಪಡೆಯಲು ಸರ್ಕಾರ ಇನ್ಫೋಸಿಸ್, ಮೈಕ್ರೋಸಾಫ್ಟ್, ಮುಂತಾದ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದರು.

ಅಜೀಂ ಪ್ರೇಂಜಿ ಕಾರ್ಯಕ್ರಮದಡಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಖಾಸಗಿ ಅಥವಾ ಸರ್ಕಾರಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುವ  ವಿದ್ಯಾರ್ಥಿನಿಯರಿಗೆ 30 ಸಾವಿರ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.

ಮಂಥನ್ ಯೋಜನೆಯಡಿ  ಹೊಸ ಅಲೋಚನೆಗಳೊಂದಿಗೆ ಉದ್ದಿಮೆ ಪ್ರಾರಂಭಿಸಲು ಇಚ್ಛಿಸುವವರನ್ನು ಪ್ರೋತ್ಸಾಹಿಸಲಾಗುತ್ತಿದೆ. ಬ್ರಿಟಿಷ್ ಕೌನ್ಸಿಲ್ ಸ್ಕೌಟ್ ಪ್ರೋಗ್ರಾಂ ಯೋಜನೆಯಡಿ  30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಇಂಗ್ಲಾಂಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಜ್ಞಾನ ವಿನಿಮಯಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದರು.

ಹೊರ ದೇಶದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಮೈಸೂರು ವಿಶ್ವವಿದ್ಯಾನಿಯಾಲಯವನ್ನು ಆಯ್ಕೆ ಮಾಡುತ್ತಾರೆ.  ಇದಕ್ಕೆ ಕಾರಣ ಇಲ್ಲಿನ ಉತ್ತಮ ಗುಣಮಟ್ಟದ ಶಿಕ್ಷಣ ಎಂದು ಅಭಿಪ್ರಾಯಪಟ್ಟರು.

Key words: Government, emphasis, job-based, education, Minister, Dr. M.C. Sudhakar