ಮನೆ ಮನೆಗೂ ಸಂವಿಧಾನ ಪೀಠಿಕೆ ತಲುಪಬೇಕು- ಸಚಿವ ಡಾ. ಹೆಚ್.ಸಿ ಮಹದೇವಪ್ಪ

ಮೈಸೂರು, ಸೆಪ್ಟಂಬರ್, 20,2025 (www.justkannada.in):  ನಾವೆಲ್ಲರೂ ಒಂದೇ ಎಂದು ಜಾಗೃತಿ ಮೂಡಿಸುವ ನಮ್ಮ ಭಾರತದ ಸಂವಿಧಾನ ಪೀಠಿಕೆ ಪ್ರತಿ ಮನೆ ಮನೆಗೆ ತಲುಪಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರು ಹೇಳಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಮಹಾ ನಗರ ಪಾಲಿಕೆ ವತಿಯಿಂದ ನಗರದ ಪುರಭವನ ಆವರಣದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಪೀಠಿಕೆ ಶಿಲಾಫಲಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ನಾವು ಭಾರತೀಯರು, ಭಾರತದ ಮೂಲ ನಿವಾಸಿಗಳು ಎಂಬುದನ್ನು ಅರಿವು ಮೂಡಿಸಲು ಸಂವಿಧಾನ ಪೀಠಿಕೆ ಅಗತ್ಯ ಹಾಗಾಗಿ ನಾನು ಸಚಿವನಾದ ಬಳಿಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪೀಠಿಕೆ ಓದಿಸಲು ಪ್ರಾರಂಭಿಸಿದೆ. ಅದೇ ರೀತಿ ಇಂದು ಮೈಸೂರು ನಗರದ ಪ್ರಮುಖ ಸ್ಥಳದಲ್ಲಿ ಪಾಲಿಕೆ ವತಿಯಿಂದ ಬೃಹತ್ ಸಂವಿಧಾನ ಪೀಠಿಕೆ ಶಿಲಾಫಲಕ ನಿರ್ಮಿಸಲಾಗಿದೆ ಇದು ಒಳ್ಳೆಯ ಬೆಳವಣಿಗೆ ಎಂದು ಪ್ರಶಂಸಿಸಿದರು.

ಇಂದು ದೇಶದಲ್ಲಿ ಸಂವಿಧಾನ ಮರೆಮಾಚುವ ಕೆಲಸ ನಡೆಯುತ್ತಿದೆ, ಆದರೆ ಅದು ಸಾಧ್ಯವಿಲ್ಲ. ಹೀಗಾಗಿ ದಲಿತರು ಅಸ್ಪೃಶ್ಯರು ಒಗ್ಗಟ್ಟಾಗಬೇಕು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಅಂಬೇಡ್ಕರ್ ವಾದ ಗಟ್ಟಿಗೊಳಿಸಬೇಕು. ಮನೆ ಮನೆಗೂ ಸಂವಿಧಾನ ಪೀಠಿಕೆ ತಲುಪಿದಾಗ ಮಾತ್ರ ಭಾರತೀಯರಾಗಿ ನಾವೆಲ್ಲಾ ಒಂದೇ ಎಂದು ಅರಿತು ಬಾಳಬಹುದು ಎಂದು ಹೇಳಿದರು.

ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಮಾತನಾಡಿ, ಸಾಂಸ್ಕೃತಿಕ ನಗರದಲ್ಲಿ ಸಂವಿಧಾನ ಪೀಠಿಕೆ ಅಳವಡಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಏಕೆಂದರೆ ಸರ್ವ ಧರ್ಮ ಸಮಭಾವ ಈ ಸಂವಿಧಾನ ಪೀಠಿಕೆಯಲ್ಲಿದೆ . ಸಂವಿಧಾನದ ಪೀಠಿಕೆ ಈ ದೇಶದ ರಕ್ಷಾ ಕವಚ ಇದಕ್ಕಾಗಿ ಎಲ್ಲಾ ಶಾಲಾ ಕಾಲೇಜುಗಳು ಹಾಸ್ಟೆಲ್ ಗಳಲ್ಲಿ ಸಂವಿಧಾನ ಪೀಠಿಕೆ ಹಾಕಲಾಗಿದೆ ಎಂದು ಹೇಳಿದರು.

ಭಾರತ ಒಂದು ಭಾರತೀಯರೆಲ್ಲ ಬಂಧು ಎಂಬ ಸಂದೇಶ ಸಾರುವ ಸಮಾನತೆಯ ಸಂಕೇತ ಕೊಟ್ಟವರು ಅಂಬೇಡ್ಕರ್ ಅವರು ಇಂತಹ ಮಹಾನ್ ನಾಯಕ ಕೊಟ್ಟ ಈ ಪೀಠಿಕೆ ಯನ್ನು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಹಾಕಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದೀಶ್ವರ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್  ಅವರು ಹಾಗೂ ಮಂಜೇಗೌಡರವರು, ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಗ್ಯಾರೆಂಟಿ ಯೋಜನೆ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಮಾಜಿ ಮೇಯರ್ ಪುರುಷೋತ್ತಮ,  ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಇದ್ದರು.

Key words:  Preamble, Constitution,reach, Minister, Dr. H.C. Mahadevappa