ಅತ್ಯಾಧುನಿಕ ಫೋಟಾನ್ ಸಾಧನಗಳನ್ನು ಬಿಡುಗಡೆ ಮಾಡಿದ ಸಚಿವ ಅಶ್ವತ್ ನಾರಾಯಣ್.

ಬೆಂಗಳೂರು,ಜೂನ್,1,2022(www.justkannada.in):  ಅತ್ಯಾಧುನಿಕ ಲೇಸರ್ ಡಿಇಡಿ ಆಧಾರಿತ ಹೈಬ್ರಿಡ್ ಮತ್ತು ರೋಬೋಟಿಕ್ ‍ಮೆಟಲ್ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಒಳಗೊಂಡ ಭಾರತದ ಪ್ರಪ್ರಥಮ ಫೋಟಾನ್-1000ಎಚ್ ಮತ್ತು ಫೋಟಾನ್-1000ಆರ್ ಸಾಧನಗಳನ್ನು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಬುಧವಾರ ಬಿಡುಗಡೆ ಮಾಡಿದರು.

ಈ ಅಂಗವಾಗಿ ಬಿಎಫ್‌ಡಬ್ಲ್ಯು ಮತ್ತು ಎಂ2ನೆಕ್ಸ್ಟ್ ಕಂಪನಿಗಳು ಪೀಣ್ಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ಈ ಕ್ಷೇತ್ರದ ಬೆಳವಣಿಗೆಗೆ ಅಗತ್ಯವಾಗಿರುವ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ಬೇಕಾದ ಅಗತ್ಯ ನೆರವನ್ನು ನೀಡಲು ರಾಜ್ಯ ಸರಕಾರ ಸಿದ್ಧವಾಗಿದೆ ಎಂದರು.

ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, `ದೇವನಹಳ್ಳಿಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಐದು ಎಕರೆ ಪ್ರದೇಶದಲ್ಲಿ 60 ಸಾವಿರ ಚದರಡಿ ವಿಸ್ತೀರ್ಣದ ಅತ್ಯಾಧುನಿಕ ಏರೋಸ್ಪೇಸ್ ಪಾರ್ಕ್ ತಲೆಯೆತ್ತುತ್ತಿದ್ದು, ಈ ವರ್ಷದ ಸೆಪ್ಟೆಂಬರ್ ಹೊತ್ತಿಗೆ ಇದರ ಕಾಮಗಾರಿ ಮುಗಿಯಲಿದೆ. ಈ ಕಟ್ಟಡದಲ್ಲಿ ಲೇಸರ್ ಡಿಇಡಿ ಮತ್ತು ರೋಬೋಟಿಕ್ ಮೆಟಲ್ ತ್ರೀ-ಡಿ ಪ್ರಿಂಟಿಂಗ್ ಕ್ಷೇತ್ರಕ್ಕೆ ಅಗತ್ಯವಿರುವ ಜಾಗವನ್ನು ಒದಗಿಸಲಾಗುವುದು ಎಂದರು.

ರಾಜ್ಯದಲ್ಲಿ ಈಗಾಗಲೇ ಇಂಡಸ್ಟ್ರಿ 4.0 ಉಪಕ್ರಮವನ್ನು ಆರಂಭಿಸಲಾಗಿದೆ. ಅಡಿಟೀವ್ ತಂತ್ರಜ್ಞಾನದಲ್ಲಿ ರಾಜ್ಯವು ಮುಂದಿದ್ದು, ಭವಿಷ್ಯದಲ್ಲಿ ಈ ಕ್ಷೇತ್ರದಲ್ಲೂ ದೇಶದ ರಾಜಧಾನಿಯಾಗಿ ಹೊರಹೊಮ್ಮಲಿದೆ. ಈ ಕ್ಷೇತ್ರದಲ್ಲಿ 35 ದಶಲಕ್ಷ ಡಾಲರ್ ವಹಿವಾಟು ನಡೆಯುತ್ತಿದ್ದು, ಸದ್ಯಕ್ಕೆ ಭಾರತದಲ್ಲಿ ಕೇವಲ ಒಂದು ದಶಲಕ್ಷ ಡಾಲರ್ ವಹಿವಾಟು ಮಾತ್ರ ನಡೆಯುತ್ತಿದೆ. ಫೋಟಾನ್ ತಂತ್ರಜ್ಞಾನವುಳ್ಳ ಒಂದು ಯಂತ್ರದ ಮೂಲಕ 3,500 ಕೋಟಿ ರೂ. ವಹಿವಾಟು ನಡೆಸಬಹುದು ಎಂದು ಅವರು ವಿವರಿಸಿದರು.

ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡೇ ರಾಜ್ಯದಲ್ಲಿ ಪಾಲಿಟೆಕ್ನಿಕ್, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ಸಮಗ್ರವಾಗಿ ಸುಧಾರಿಸಲಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ ಕ್ರಮವಾಗಿ 1 ಲಕ್ಷ ವಿದ್ಯಾರ್ಥಿಗಳು ಪಾಲಿಟೆಕ್ನಿಕ್, 70 ಸಾವಿರ ವಿದ್ಯಾರ್ಥಿಗಳು ಡಿಪ್ಲೊಮಾ ಮತ್ತು 15 ಸಾವಿರ ವಿದ್ಯಾರ್ಥಿಗಳು ಜಿಟಿಟಿಸಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಅಶ್ವತ್ ನಾರಾಯಣ್ ನುಡಿದರು.

ತಂತ್ರಜ್ಞಾನದ ಮೂಲಕ ಆತ್ಮನಿರ್ಭರ ಭಾರತವನ್ನು ಕಟ್ಟಬೇಕೆನ್ನುವುದು ಪ್ರಧಾನಿ ಮೋದಿಯವರ ಆಶಯವಾಗಿದೆ. ಇದಕ್ಕೆ ತಕ್ಕಂತೆ, ಈ ಕಂಪನಿಗಳು ಬೆಂಗಳೂರಿನ ತಂತ್ರಜ್ಞಾನ ಕ್ಷೇತ್ರಕ್ಕೆ ತಮ್ಮ ಅತ್ಯಾಧುನಿಕ ಸಾಧನಗಳನ್ನು ಪರಿಚಯಿಸಿವೆ. ರಾಜ್ಯದಲ್ಲಿ ಜಾರಿಯಾಗುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಇಂತಹ ಆಧುನಿಕ ಜ್ಞಾನಧಾರೆಗಳ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲಾಗುವುದು ಎಂದು ಸಚಿವರು ಪ್ರತಿಪಾದಿಸಿದರು.

ನೀತಿ ಆಯೋಗದ ಸದಸ್ಯ ವಿ.ಕೆ.ಸಾರಸ್ವತ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ವರ್ಚುಯಲ್ ರೂಪದಲ್ಲಿ ಮಾತನಾಡಿದರು. ಉಳಿದಂತೆ ಉದ್ಯಮಿಗಳಾದ ರಘು, ಮೋಹನ್, ಮ್ಯಾಥ್ಯೂಸ್ ಮುಂತಾದವರು ಉಪಸ್ಥಿತರಿದ್ದರು.

Key words: Minister-Aswath Narayan-released-sophisticated-photon- devices.