ಮಹಿಳಾ ನೌಕರರ ಋತುಚಕ್ರ ರಜೆಗೆ ಪುರುಷ ನೌಕರರ ವಿರೋಧ: ಸರ್ಕಾರಕ್ಕೆ ಪತ್ರ

ಬೆಂಗಳೂರು, ಜನವರಿ,23,2026 (www.justkannada.in): ಸರ್ಕಾರಿ ಮಹಿಳಾ ನೌಕರರಿಗೆ ನೀಡಲಾಗುತ್ತಿರುವ ಋತುಚಕ್ರ ರಜೆಗೆ  ಸರ್ಕಾರಿ ಪುರುಷ ನೌಕರರು ವಿರೋಧ ವ್ಯಕ್ತಪಡಿಸಿದ್ದು ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಚಿವಾಲಯದ ರಾಜ್ಯ ಶಿಷ್ಟಾಚಾರ ವಿಭಾಗದ ನೌಕರರು ಈ ಕುರಿತು ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ 12 ಋತುಚಕ್ರ ರಜೆ ನೀಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಕೋರಿದ್ದಾರೆ.

ಸಮರ್ಪಕ ಅಧ್ಯಯನ ನಡೆಸದೇ ಋತುಚಕ್ರ ರಜೆಯನ್ನು ಜಾರಿಗೆ ತಂದಿರುವುದು ಸರಿಯಲ್ಲ. ಈಗಾಗಲೇ ಸರ್ಕಾರಿ ನೌಕರರಿಗೆ ಲಭ್ಯವಿರುವ ವಿವಿಧ ರಜೆಗಳನ್ನು ಮಹಿಳಾ ನೌಕರರು ಬಳಸಿಕೊಳ್ಳಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೂ ಪತ್ರ ರವಾನಿಸಿದ್ದಾರೆ.

ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡುವುದರಿಂದ ಪುರುಷ ನೌಕರರ ಮೇಲೆ ಹೆಚ್ಚುವರಿ ಕೆಲಸದ ಹೊರೆ ಬೀಳುತ್ತಿದೆ. ಇದರಿಂದ ಪುರುಷ ಮತ್ತು ಮಹಿಳಾ ನೌಕರರ ನಡುವೆ ವೈಮನಸ್ಸು ಹೆಚ್ಚಾಗುವ ಸಾಧ್ಯತೆ ಇದೆ ಎಂದು  ಪತ್ರದಲ್ಲಿ ತಿಳಿಸಿದ್ದಾರೆ.

Key words: women employees, menstrual leave, oppose, Letter, government