ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ: ಖಡಕ್ ಎಚ್ಚರಿಕೆ ನೀಡಿದ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಮೇ,23,2023(www.justkannada.in): ನಾಲ್ಕು ವರ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೀರಿ ಅಂತಾ ಗೊತ್ತಿದೆ. ಆ ತಪ್ಪು ಮರುಕಳಿಸಬಾರದು. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹದಗೆಡಬಾರದು. ಅಕ್ರಮ ಚಟುವಟಿಕೆಗಳ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ ನೀಡಿದರು.

 ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಭೆ ನಡೆಸಿ ಚರ್ಚಿಸಿದರು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನ ನೀಡಿದ ಸಿಎಂ ಸಿದ್ಧರಾಮಯ್ಯ, ನೈತಿಕ ಪೊಲೀಸ್ ಗಿರಿ ಮಾಡುವವರ‌ ವಿರುದ್ಧ ಕ್ರಮ ಕೈಗೊಳ್ಳಬೇಕು.

ಇಲ್ಲವಾದರೆ ಪ್ರಕರಣಕ್ಕೆ ಆಯಾ ವಿಭಾಗದ ಡಿಸಿಪಿ ಹಾಗೂ ಎಸ್​ಪಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ರೌಡಿಸಂ ಸೇರಿ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಅಗಬೇಕು. ಅಕ್ರಮ ಕ್ಲಬ್ ನಡೆಸಲು ಅವಕಾಶ ನೀಡಬಾರದು. ಯಾರಿಗೂ ತಾರತಮ್ಯ ಮಾಡದೆ ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಿ ಎಂದು ಹೇಳಿದರು.

ಹಾಗೆಯೇ  ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಿದ್ದೀರಾ ಅಂತಾ ಗೊತ್ತಿದೆ. ಮುಂದೆ ಯಾರಿಗೂ ತಾರತಮ್ಯ ಮಾಡಬೇಡಿ. ಮುಂದೆ ಜಿಲ್ಲಾ ಎಸ್​​ಪಿಗಳ ಜೊತೆ ಸಭೆ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚು ನಿಗಾ ಇಡಬೇಕು. ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿದರೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಹಾಗೆಯೇ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಪ್ರಕರಣ ದಾಖಲಿಸದೇ ಇರುವ ವಿಚಾರವೂ ಸಭೆಯಲ್ಲಿ ಚರ್ಚೆ‌ ನಡೆಯಿತು. ಸಭೆಯಲ್ಲಿ ಡಿಜಿ ಐಜಿಪಿ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ​​ ಪ್ರತಾಪ್ ರೆಡ್ಡಿ, ಸಚಿವರಾದ ಮುನಿಯಪ್ಪ, ಜಮೀರ್ ಅಹಮದ್ ಖಾನ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್​​, ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್​ ಉಪಸ್ಥಿತರಿದ್ದರು.

Key words: Meeting -senior -police –officers-CM Siddaramaiah- warned