ಮದುವೆಗೆ ಹೆಣ್ಣು ಸಿಗದ ಹಿನ್ನೆಲೆ: ‘ನಮಗೆ ಮಠ ಕಟ್ಟಿಸಿಕೊಡಿ’ ಎಂದು ಬೇಡಿಕೆಯಿಟ್ಟು ಅರ್ಜಿ ಬರೆದ ಯುವಕರು

ಮಂಡ್ಯ,ಡಿಸೆಂಬರ್,10,2025 (www.justkannada.in):  ಇತ್ತೀಚಿನ ದಿನಗಳಲ್ಲಿ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಗುವುದೇ ಬಲು ಕಷ್ಟವಾಗಿದೆ. ಅದರಲ್ಲೂ ರೈತರ ಮಕ್ಕಳು, ಸರಿಯಾದ ಕೆಲಸವಿಲ್ಲದ ಯುವಕರಿಗೆ ಹೆಣ್ಣು ಕೊಡಲು ಪೋಷಕರು ಹಿಂದೇಟು ಹಾಕುತ್ತಾರೆ. ಅಂತೆಯೇ ಇಲ್ಲೊಂದು ಗ್ರಾಮದಲ್ಲಿ ಮದುವೆಯಾಗಲು  ಹೆಣ್ಣು ಸಿಗದೆ ಹತಾಶೆಗೊಳಗಾದ ಯುವಕರು  ನಮಗೆ  ಮಠ ಕಟ್ಟಿಸಿಕೊಡಿ ಎಂದು ವಿಚಿತ್ರ ಬೇಡಿಕೆಯಿಟ್ಟು ಅರ್ಜಿ ಸಲ್ಲಿಸಿದ್ದಾರೆ.

ಹೌದು ಸಕ್ಕರೆ ನಾಡು ಮಂಡ್ಯದಲ್ಲಿ ಈ ಘಟನೆ ನಡೆದಿದೆ.  ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಮದುವೆಯಾಗದ ಯುವಕರು  ಪಂಚಾಯಿತಿ ವತಿಯಿಂದ ತಮಗೆ ಮಠ ಕಟ್ಟಿಸಿಕೊಡಿ ಎಂದು ವಿಚಿತ್ರ ಕೋರಿಕೆ ಸಲ್ಲಿಸಿದ್ದಾರೆ.

ತಮ್ಮೂರಿನ ಪಂಚಾಯಿತಿಯ  ಗ್ರಾಮಸಭೆಯಲ್ಲಿ ಮಠಕ್ಕಾಗಿ ಬೇಡಿಕೆಯಿಟ್ಟು 30ಕ್ಕೂ ಹೆಚ್ಚು ಅವಿವಾಹಿತ ಯುವಕರು ಪತ್ರ ಬರೆದಿದ್ದಾರೆ. ತಮಗೆ ಮಠ ಕಟ್ಟಿಸಿಕೊಡುವಂತೆ ಪಂಚಾಯಿತಿಗೆ ಪ್ರಸನ್ನ ಎಂಬ ಯುವಕನ ನೇತೃತ್ವದಲ್ಲಿ ಅರ್ಜಿ ಬರೆದು ಮನವಿ ಮಾಡಿದ್ದಾರೆ.

ಅವಿವಾಹಿತ ಯುವಕರ  ಈ ವಿಚಿತ್ರ ಅರ್ಜಿ ಕಂಡು ಪಂಚಾಯಿತಿ ಸದಸ್ಯರು ಹಾಗು ಅಧಿಕಾರಿ ಒಂದು ಕ್ಷಣಕಾಲ ಅಚ್ಚರಿಗೊಂಡರು. ಯುವಕರು ನೀಡಿರುವ ಈ ಮನವಿಯನ್ನು ತಹಶೀಲ್ದಾರ್ ಗಮನಕ್ಕೆ ತರುವುದಾಗಿ ಪಂಚಾಯಿತಿಯ ಪಿಡಿಒ ತಿಳಿಸಿದರು.

ತಮ್ಮೂರಿನ ಊರಿನ‌ ಗಂಡು ಮಕ್ಕಳ ಹತಾಶೆ ಸ್ಥಿತಿಯಿಂದಾಗಿ ಮಕ್ಕಳ ಪೋಷಕರು ಕಂಗಾಲಾಗಿದ್ದು, ರೈತ ಕುಟುಂಬದ  ಗಂಡು ಮಕ್ಕಳಿಗೆ ಹೆಣ್ಣು ಕೊಡದ ಸ್ಥಿತಿಗೆ ಬಂದಿದ್ದಕ್ಕೆ ಪೋಷಕರು ವಿಷಾದ ವ್ಯಕ್ತಪಡಿಸಿದ್ದಾರೆ.

Key words: marry,  Youths, petition, demanding, ‘Build, Mutt, Mandya