ಗುಂಪು ಹಲ್ಲೆಯಿಂದ ಯುವಕ ಸಾವು ಕೇಸ್: ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

ದಕ್ಷಿಣ ಕನ್ನಡ, ಮೇ,1,2025 (www.justkannada.in):  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಕುಡುಪು ಬಳಿ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಯುವಕನ ಮೇಲೆ ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದಡಿ ಮೂವರು ಪೊಲೀಸ್ ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ.

ಮಂಗಳೂರು ಗ್ರಾಮಾಂತರ ಠಾಣೆ ಇನ್ ​​ಸ್ಪೆಕ್ಟರ್ ಶಿವಕುಮಾರ್​, ಹೆಡ್ ಕಾನ್ ​​ಸ್ಟೇಬಲ್ ಚಂದ್ರ. ಪಿ ಮತ್ತು ಕಾನ್ ​ಸ್ಟೇಬಲ್​ ಯಲ್ಲಾಲಿಂಗ ಅವರನ್ನು ಅಮಾನತು ಮಾಡಿ ಪೊಲೀಸ್​ ಕಮಿಷನರ್​ ಅನುಪಮ್​ ಅಗ್ರವಾಲ್ ಆದೇಶಿಸಿದ್ದಾರೆ ಎನ್ನಲಾಗಿದೆ.

ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಕೇರಳ ವಯನಾಡು ಮೂಲದ ಅಶ್ರಫ್ ನ ಮೇಲೆ ಹಲ್ಲೆ ಮಾಡಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅಶ್ರಫ್ ಸಾವನ್ನಪ್ಪಿದ್ದನು. ಪ್ರಕರಣ ಸಂಬಂಧ 20 ಜನರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಘಟನೆ ಸಂಬಂಧ ಆರಂಭದಲ್ಲಿ ”ಅಸಹಜ ಸಾವು” ಪ್ರಕರಣ ದಾಖಲಿಸಲಾಗಿತ್ತು. ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಇದೀಗ ಕರ್ತವ್ಯ ಲೋಪ ಆರೋಪದಡಿ ಗ್ರಾಮಾಂತರ ಠಾಣೆ ಇನ್​​ಸ್ಪೆಕ್ಟರ್​ ಸೇರಿದಂತೆ ಮೂವರು ಪೊಲೀಸರನ್ನು ಅಮಾನತು  ಮಾಡಲಾಗಿದೆ.

ಮಂಗಳೂರಿನ ಹೊರವಲಯದ ಕುಡುಪು ಎಂಬಲ್ಲಿ ಏಪ್ರಿಲ್ 27ರ ಸಂಜೆ ಒಂದು ಕ್ರಿಕೆಟ್​ ಪಂದ್ಯ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕೇರಳದ ವಯನಾಡ್​ ಮೂಲದ ಮೊಹಮ್ಮದ್ ಆಶ್ರಫ್​ ಬಂದಿದ್ದಾನೆ. ಕ್ರಿಕೆಟ್​ ಆಡುತ್ತಿದ್ದವರಿಗೂ ಹಾಗೂ ಆತನ ಮಧ್ಯೆ ಗಲಾಟೆ ಉಂಟಾಗಿದೆ. ಈ ವೇಳೆ ಅಲ್ಲಿದ್ದ ಗುಂಪೊಂದು ಆತನನ್ನು ಹಿಗ್ಗಾಮುಗ್ಗಾ ಥಳಿಸಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದೇ ಹಲ್ಲೆಗೆ ಕಾರಣವೆಂದು ಹೇಳಲಾಗಿತ್ತು.

Key words: Mangalore, attack, Youth dies, case, Three police, suspended