ನಾಳೆಯಿಂದ ಶ್ರೀ ಮಲೆ ಮಹದೇಶ್ವರ ಮಹಾ ಕುಂಭಮೇಳ ಮಹೋತ್ಸವ: ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆ.

ಮೈಸೂರು,ಅಕ್ಟೋಬರ್,12,2022(www.justkannada.in):  ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕುದಿನಗಳ ಕಾಲ ಶ್ರೀ ಮಲೆ ಮಹದೇಶ್ವರರ ಮಹಾ ಕುಂಭಮೇಳ ಮಹೋತ್ಸವ ನಡೆಯಲಿದ್ದು ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ಈ ಕುರಿತು ಜೆಎಸ್ಎಸ್ ಶಾಖಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಎಸ್ಎಸ್ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಅ.13 ರಿಂದ ಅ.16 ರವರೆಗೆ ತ್ರಿವೇಣಿ ಸಂಗಮದಲ್ಲಿ ಮಲೆ ಮಹದೇಶ್ವರರ ಮಹಾ ಕುಂಭಮೇಳ ಜರುಗುತ್ತಿದೆ. ನಾಲ್ಕು ದಿನಗಳ ಕಾಲ ಮಹಾ ಕುಂಭಮೇಳಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ. ಈ ಮಹಾ ಕುಂಭಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಮಹದೇಶ್ವರರ ಜೀವನ ಚರಿತ್ರೆ ಕುರಿತು ಅಲ್ಲಿ ವಿಚಾರ ಸಂಕಿರಣ ಕೂಡ ನಡೆಯಲಿದೆ. ಮೈಸೂರು, ಚಾಮರಾಜನಗರ ಭಾಗಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, 2013ರ ಬಳಿಕ  9 ವರ್ಷಗಳ ಬಳಿಕ ಈ ಮಹಾ ಕುಂಭಮೇಳ ಮೇಳ ಜರುಗುತ್ತಿದೆ. ರಾಜ್ಯ ಸರ್ಕಾರದಿಂದ ಈ ಮಹಾ ಕುಂಭಮೇಳಕ್ಕೆ ಸರ್ಕಾರದಿಂದ 4 ಕೋಟಿ ಹಣ ಬಿಡುಗಡೆ ಮಾಡಿದೆ. ಭಕ್ತರಿಂದಲೂ ಕೂಡ ಸುಮಾರು 1 ಸಾವಿರ ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದೆ. 5 ರಿಂದ 6 ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ. ಈ ಮಹಾ ಕುಂಭಮೇಳವನ್ನ ಮೈಸೂರು, ಚಾಮರಾಜನಗರ ಹಾಸನ ಮಂಡ್ಯ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿ ಗೋಷ್ಠಿಯಲ್ಲಿ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಸಚಿವ ನಾರಾಯಣಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: mandya-Shri Male Mahadeshwar Maha Kumbh Mela- celebration – tomorrow.