ಜು.12 ರ ಲೋಕ್ ಅದಾಲತ್ ಸದುಪಯೋಗ ಪಡಿಸಿಕೊಳ್ಳಿ- ನ್ಯಾಯಾಧೀಶ ಆನಂದ್

ಮಂಡ್ಯ,ಜುಲೈ,5,2025 (www.justkannada.in): ಈ ಭಾರಿ ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಕಾನೂನು ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಿದ್ದು, ಸಾರ್ವಜನಿಕರು ಲೋಕ್ ಅದಾಲತ್ ಅನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆನಂದ್ ಎಂ ಹೇಳಿದರು.

ಇಂದು  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಆನಂದ್ ಎಂ ಅವರು,  ಜುಲೈ 12 ರಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸದರಿ ವರ್ಷದಲ್ಲಿ ನಡೆಯುತ್ತಿರುವ 2 ಲೋಕ್ ಅದಾಲತ್ ಇದಾಗಿದ್ದು, ಬಾಕಿ ಇರುವ  ಸಿವಿಲ್ ಪ್ರಕರಣಗಳು, ವಿಭಾಗದ ದಾವೆಗಳು, ಹಣಕಾಸು ವಸೂಲಾತಿ ದಾವೆಗಳು, ಮೋಟಾರು ವಾಹನಗಳ ಪ್ರಕರಣಗಳು, ಎಂ.ಎಂ. ಆರ್. ಡಿ ಪ್ರಕರಣಗಳು, ಜೀವನಾಂಶ ಪ್ರಕರಣಗಳು, ದಾಂಪತ್ಯ ಪುನರ್ ಸ್ಥಾಪನೆ ಪ್ರಕರಣಗಳು, ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು ಹಾಗೂ ರಾಜಿ ಆಗಬಹುದಾದಂತಹ ಕ್ರಿಮಿನಲ್ ಪ್ರಕರಣಗಳನ್ನು ತೆಗೆದುಕೊಂಡು ಇತ್ಯಾರ್ಥ ಮಾಡಲಾಗುವುದು ಎಂದರು.

ತಾಲ್ಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ತಾಲೂಕಿನ ಎಲ್ಲಾ ನ್ಯಾಯಾಲಯಗಳಲ್ಲಿ ವ್ಯಾಜ್ಯಪೂರ್ವ ಪ್ರಕಾರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಕಾರ್ಮಿಕ ವಿವಾದ ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲೋಕ್ ಅದಾಲತ್ ನಲ್ಲಿ ಭಾಗವಹಿಸಿ   ಪ್ರಕರಣಗಳನ್ನು ಕಾನೂನು ಬದ್ಧವಾಗಿ ಇತ್ಯರ್ಥಪಡಿಸಿಕೊಳ್ಳಿ ಎಂದು ಕರೆ ನೀಡಿದರು.

90 ದಿನಗಳ ಮಧ್ಯಸ್ಥಿಕೆ ಅಭಿಯಾನ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಈ ಭಾರಿ 90 ದಿನಗಳ ಮಧ್ಯಸ್ಥಿಕೆ  ಆಂದೋಲನವನ್ನು ಜುಲೈ 1 ರಿಂದ ಅಕ್ಟೋಬರ್ 7 ರವರೆಗೆ ಹಮ್ಮಿಕೊಳ್ಳಲಾಗಿದೆ,

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮಧ್ಯಸ್ಥಿಕೆ ವಹಿಸುವ ಮೂಲಕ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ, “ನೇಷನ್ 90 ಡೆಸ್” ಎಂಬ  ಘೋಷವಾಕ್ಯದಡಿಯಲ್ಲಿ 7 ತಾಲ್ಲೂಕಿನಲ್ಲೂ ಮಧ್ಯಸ್ಥಿಕೆ ವಹಿಸಿ ಕಾನೂನು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಮಧ್ಯಸ್ಥಿಕೆ ಡ್ರೈವ್ ನಲ್ಲಿ ನುರಿತ ವಾಕೀಲರು ಹಾಗೂ ಕಕ್ಷಿದಾರರು ಇರುತ್ತಾರೆ. ಇಬ್ಬರಿಗೂ ಸಹ ಸಮಾಧಾನ ತರುವ ರೀತಿಯಲ್ಲಿ ಹಾಗೂ ನ್ಯಾಯ ಸಮ್ಮತವಾಗಿ ಪ್ರಕರಣಗಳು ವಿಲೇವಾರಿ ಮಾಡಲಾಗುವುದು ಎಂದರು.vtu

Key words: Mandya, Lok Adalat, July 12, Judge, Anand