“ಮಂಡ್ಯ ರೈತರ ಮಡಿಲು ತುಂಬಿದ ಐಐಹೆಚ್ಆರ್ ಅರ್ಕಾ ಚೆನ್ನಾ ಕನಕಾಂಬರ”

ಬೆಂಗಳೂರು,ಫೆಬ್ರವರಿ,11,2021(www.justkannada.in) : ನಾಟಿ ಕನಕಾಂಬರ ಬೆಳೆದು ಇಳುವರಿ ಇಲ್ಲದೆ ಇಷ್ಟು ವರ್ಷ ಕೈಸುಟ್ಟು ಕೊಳ್ಳುತ್ತಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರೈತರು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಹೆಚ್ಆರ್ )ಅಭಿವೃದ್ದಿ ಪಡಿಸಿರುವ ಅರ್ಕಾ ಚೆನ್ನಾ ಕನಕಾಂಬರ ಬೆಳೆದು ಬದುಕು ಬಂಗಾರವಾಗಿಸಿಕೊಂಡಿದ್ದಾರೆ.jkಭಾರತೀಯ ತೋಟಗಾರಿಕೆ ಮೇಳದಲ್ಲಿ ಪಾಲ್ಗೊಳ್ಳಲು ಬಂದಿರುವ ಮಳವಳ್ಳಿಯ ಮಹೇಶ್, ಕುಮಾರ್ ಮತ್ತು ಮಂಜು ಅವರು ಹೆಸರಘಟ್ಟದ ಐಐಹೆಚ್ಆರ್ ಆವರಣದಲ್ಲಿ ಬೆಳೆಸಿರುವ ಅರ್ಕಾ ಕನಕಾಂಬರ ಹೂಗಳನ್ನು ಕಣ್ತುಂಬಿಕೊಳ್ಳುವುದರಲ್ಲಿ ನಿರತರಾಗಿದ್ದರು. ಕಾರಣ ಈ ತಳಿ ಅವರ ಆದಾಯವನ್ನು ಕಳೆದ ಎರಡು ವರ್ಷದಲ್ಲಿ ದ್ವಿಗುಣಗೊಳಿಸಿದೆ.

ಅರ್ಧ ಎಕರೆ ಹೊಲದಲ್ಲಿ ಪ್ರತಿ ವಾರ 60 ಕೆ.ಜಿ.ಇಳುವರಿ

ಐಐಹೆಚ್ಆರ್ ನ ಈ ತಳಿಯನ್ನು ತಮ್ಮ ಅರ್ಧ ಎಕರೆ ಹೊಲದಲ್ಲಿ ಬೆಳೆದ ಮಹೇಶ್, ಪ್ರತಿ ವಾರ 60 ಕೆ.ಜಿ.ಇಳುವರಿ ಪಡೆಯುತ್ತಿದ್ದಾರೆ. ಸಾಮಾನ್ಯವಾಗಿ ರೈತರನ್ನು ಭಾದಿಸುವ ಸೊರಗು ರೋಗ ಕನಕಾಂಬರದ ಇಳುವರಿಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಅರ್ಕಾ ಚೆನ್ನಾ ಸೊರಗು ರೋಗ ನಿರೋಧಕ ಶಕ್ತಿ ಹೊಂದಿದ್ದು, ನಾಟಿ ತಳಿಗಿಂತ ದುಪ್ಪಟ್ಟು ಇಳುವರಿಯನ್ನು ಮಹೇಶ್ ಮತ್ತವರ ಗೆಳೆಯರಿಗೆ ನೀಡುತ್ತಿದೆ.

ಪ್ರತಿ ಕೆಜಿ ಕನಕಾಂಬರಕ್ಕೆ 300 ರೂ. ನಿಂದ 1600 ರೂ. ಗಳಿಕೆ

ಅರ್ಕಾ ಚೆನ್ನದಿಂದ ಪ್ರತಿ ಕೆಜಿ ಕನಕಾಂಬರಕ್ಕೆ ರೂ.300 ರಿಂದ ರೂ.1600 ಗಳಿಕೆ. ಈ ತಳಿಯ ವಿಶೇಷ ಏನೆಂದರೆ ವರ್ಷ ಪೂರ್ತಿ ಇಳುವರಿ ನೀಡುವ ಜತೆಗೆ ಹೆಚ್ಚಿನ ತೂಕವನ್ನು ಹೊಂದಿರುತ್ತದೆ. ನಾಟಿ ಕನಂಕಾಂಬರ ಬೆಳೆಯಿಂದ ಕೆಜಿಗೆ 60 ರಿಂದ 100 ಪಡೆಯುತ್ತಿದ್ದ ಮಳವಳ್ಳಿ ರೈತರು ಅರ್ಕಾ ಚೆನ್ನದಿಂದ ಪ್ರತಿ ಕೆಜಿ ಕನಕಾಂಬರಕ್ಕೆ ರೂ.300 ರಿಂದ ರೂ.1600 ಪಡೆಯುತ್ತಿದ್ದಾರೆ. ಈ ಸಸಿ ದೀರ್ಘ ಬಾಳಿಕೆಯನ್ನು ಹೊಂದಿದ್ದು, ಒಂದು ಬಾರಿ ಸಸಿಗಳನ್ನು ನಾಟಿ ಮಾಡಿದರೆ ಕನಿಷ್ಟ ಆರು ವರ್ಷಗಳವರೆಗೆ ಇಳುವರಿಯನ್ನು ಪಡೆಯಬಹುದಾಗಿದೆ ಎಂದು ರೈತ ಮಂಜು ತಿಳಿಸಿದರು.

ನಾವು ನಾಟಿ ಕನಕಾಂಬರ ಬೆಳೆದು ನಷ್ಟ ಅನುಭವಿಸುತ್ತಿದ್ದೆವು. ಐಐಹೆಚ್ಆರ್ ವಿಜ್ಞಾನಿ ಡಾ. ಅಶ್ವಥ್ ಅವರಿಂದ ಅರ್ಕಾ ಚೆನ್ನಾ ತಳಿಗಳನ್ನು ಪಡೆದು ಹೆಚ್ಚಿನ ಇಳುವರಿ ಪಡೆಯುತ್ತಿದ್ದೇವೆ. ಮುಖ್ಯವಾಗಿ ನಮ್ಮನ್ನು ಕಾಡುತ್ತಿದ್ದ ಸೊರಗು ರೋಗ ನಿರೋಧಕ ಶಕ್ತಿಯನ್ನು ಈ ತಳಿ ಹೊಂದಿದೆ ಎಂದು ಮಹೇಶ್ ಎಂದರು.

ನಾಟಿ ಮಾಡಿದ ಮೂರು ತಿಂಗಳಲ್ಲಿ ಇಳುವರಿಯನ್ನು ಪಡೆಯಬಹುದು, ಇದರೊಂದಿಗೆ ಹೆಚ್ಚಿನ ತೂಕ ನೀಡುವುದರ ಜತೆಗೆ ಆಕರ್ಷಕ ಬಣ್ಣವನ್ನು ಅರ್ಕಾ ಚೆನ್ನಾ ಹೊಂದಿದೆ ಎಂದು ಮಹೇಶ್ ವಿವರಿಸಿದರು.

ಮೂರು ಲಕ್ಷ ಸಸಿಗಳಿಗೆ ಬೇಡಿಕೆ

ಅರ್ಕಾ ಚೆನ್ನಾಕ್ಕೆ ಬೇಡಿಕೆ ಹೆಚ್ಚುತ್ತಿದೆ ಎನ್ನುವುದಕ್ಕೆ ಐಐಹೆಚ್ಆರ್ ಗೆ ಈಗಾಗಲೇ 3 ಲಕ್ಷ ಸಸಿಗಳಿಗೆ ಬೇಡಿಕೆ ಬಂದಿರುವುದೇ ಸಾಕ್ಷಿ. ರೂಟ್ ಮಾಡಿರುವ 1 ಲಕ್ಷ ಸಸಿಗಳನ್ನು ಈಗಾಗಲೇ ಐಐಹೆಚ್ಆರ್ ರೈತರಿಗೆ ಪೂರೈಸಿದೆ. ಬೇಡಿಕೆ ಹೆಚ್ಚಿರುವ ಕಾರಣ, ಐಐಹೆಚ್ಆರ್ ಮಳವಳ್ಳಿಯ ರೈತರ ಮೊರೆ ಹೋಗಿದ್ದು ಅವರಿಂದ ಸಸಿಗಳನ್ನು ಖರೀದಿಸುತ್ತಿದೆ ಎಂದರು.

ಕನಕಾಂಬರದ ಆದಾಯದ ಜತೆಗೆ ಮಹೇಶ್ ಮತ್ತವರ ಗೆಳೆಯರು ಸುಮಾರು ಒಂದು ಲಕ್ಷ  ಸಸಿಗಳನ್ನು ಐಐಹೆಚ್ಆರ್ ಗೆ ಮಾರಾಟ ಮಾಡುವ ಮೂಲಕ ಆದಾಯಗಳಿಸುತ್ತಿದ್ದಾರೆ. ಈ ಸಸಿ ಸೊರಗು ರೋಗ ನಿರೋಧಕ ಶಕ್ತಿಹೊಂದಿರುವ ಕಾರಣ ಬೇಡಿಕೆ ಹೆಚ್ಚಾಗಿದೆ. ನಾವು ರೈತರ ಬೇಡಿಕೆಯನ್ನು ಪೂರೈಸಲು ಮಳವಳ್ಳಿ ರೈತರಿಂದ ಸಸಿಗಳನ್ನು ಖರೀದಿಸುತ್ತಿದ್ದೇವೆ ಎಂದು ಅಶ್ವಥ್ ಹೇಳಿದರು.

ಮಳವಳ್ಳಿಯ ಸುಮಾರು 7 ಜನ ರೈತರು ಒಂದು ಗುಂಪು ರಚಿಸಿ ವಾರಕ್ಕೆ ಎರಡು ಬಾರಿ ಅರ್ಕಾ ಚೆನ್ನಾದ ಕೊಯ್ಲು ಮಾಡಿ ಕೆ.ಆರ್.ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹಬ್ಬದ ಸಂದರ್ಭದಲ್ಲಿ  ಒಂದು ಕೆಜಿಗೆ 1600 ರೂ.ಗಳವರೆಗೆ ಪಡೆದಿದ್ದಾರೆ ಎಂದು ವಿವರಿಸಿದರು.

ಒಂದು ಎಕರೆಗೆ 6 ಸಾವಿರ ಸಸಿಗಳನ್ನು ನೆಡಬಹುದು, ಮಹೇಶ್ ತಮ್ಮ ಅರ್ಧ ಎಕರೆ ಹೊಲದಲ್ಲಿ 2 ಸಾವಿರ ಸಸಿ ನೆಟ್ಟು ಪ್ರತಿ ವಾರ 60 ರಿಂದ 70 ಕೆ.ಜಿ. ಇಳುವರಿ ಪಡೆಯುತ್ತಿದ್ದಾರೆ. ನಾವು ಪ್ರತಿ ಸಾಲುಗಳ ನಡುವೆ ಎರಡು ಅಡಿ ಅಂತರ ಸೂಚಿಸಿದ್ದೇವೆ. ಮಂಡ್ಯದ ರೈತರು ಕೊಯ್ಲು ಮಾಡಲು ಅನುಕೂಲವಾಗುವ ದೃಷ್ಟಿಯಿಂದ ಪ್ರತಿ ಸಾಲುಗಳ ನಡುವೆ 5 ಅಡಿಗಳ ಅಂತರ ನೀಡಿದ್ದಾರೆ ಎಂದಿರುವ ಅಶ್ವಥ್ ವಾರದಲ್ಲಿ ಎರಡು ಬಾರಿ ಕೊಯ್ಲು ಮಾಡಬಹುದು ಎಂದು ಮಾಹಿತಿ ನೀಡುತ್ತಿದ್ದಾರೆ.

ಹೊಸ ಗಿಡ ಸಂಶೋಧನೆ

ಅರ್ಕಾ ಚೆನ್ನಾಕ್ಕೆ ಸಿಕ್ಕ ಬೇಡಿಕೆ ಮತ್ತು ಹೆಚ್ಚಿನ ಇಳುವರಿ ಗಮನಿಸಿ ಐಐಹೆಚ್ಆರ್ ಹೊಸ ಗಿಡವನ್ನು ಅಭಿವೃದ್ದಿಪಡಿಸಿದ್ದು, ಮಳೆಗಾಲದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುವ ಇನ್ನೊಂದು ಕನಕಾಂಬರ ಗಿಡದ ಸಂಶೋಧನೆ ಆರಂಭಿಕ ಹಂತದಲ್ಲಿದೆ. ಅರ್ಕಾ ಚೆನ್ನಾಕ್ಕೆ ನೆರೆಯ ಆಂಧ್ರಪ್ರದೇಶದಿಂದ ಬಾರೀ ಬೇಡಿಕೆ ಬಂದಿದ್ದು, ಈಗಾಗಲೇ ಮೂರು ಲಕ್ಷ ಗಿಡಕ್ಕೆ ರೈತರು ಬೇಡಿಕೆ ಸಲ್ಲಿಸಿದ್ದಾರೆ, ನಮಗೆ ಸಸಿಗಳನ್ನು ಪೂರೈಸುವುದೇ ಸವಾಲಾಗಿದೆ ಎಂದರು.

ಮಳೆಗಾಲದಲ್ಲಿ ರೈತರಿಗೆ ಹೆಚ್ಚಿನ ಇಳುವರಿ ದೊರೆಯುತ್ತಿಲ್ಲ, ಹೀಗಾಗಿ ಪಾಳುಬಿದ್ದ ಪಾಲಿಹೌಸ್ ಗಳಲ್ಲಿ ಕನಕಾಂಬರವನ್ನು ಬೆಳೆಯಬಹುದಾಗಿದೆ ಎನ್ನುವ ಅಶ್ವಥ್ , ಮಳೆಯನ್ನು ತಡೆಯವ ಪ್ಲಾಸ್ಟಿಕ್ ಹೊದಿಕೆಯನ್ನು ಹೊಲದಲ್ಲಿ ಅಳವಡಿಸಿ ಕೂಡ ಹೂವನ್ನು ಬೆಳೆಯಬಹುದಾಗಿದೆ ಹೇಳಿದರು.

ಹಬ್ಬ ಹರಿದಿನಗಳಲ್ಲಿ ಕನಕಾಂಬರಕ್ಕೆ ಹೆಚ್ಚಿನ ಬೇಡಿಕೆ Mandya,farmers,Lap,Filled,IIHR,Arca Chenna,Kanakambara ಮುಖ್ಯವಾಗಿ ಹಬ್ಬ ಹರಿದಿನಗಳು ಮಳೆಗಾಲದಲ್ಲಿ ಬರುವುದರಿಂದ ಕನಕಾಂಬರಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ, ಕಡಿಮೆ ಇಳುವರಿ ಬರುವುದರಿಂದ ಈ ನಿಟ್ಟಿನಲ್ಲಿ ನಾವು ಸಂಶೋಧನೆ ಮಾಡುತ್ತಿದ್ದೇವೆ. ಅಲ್ಲದೆ ಸಾವಯವ ಗೊಬ್ಬರ ಬಳಕೆ ಮಾತ್ರದಿಂದಲೇ ಒಳ್ಳೆಯ ಇಳುವರಿ ಪಡೆಯಬಹುದು. ಹನಿ ನೀರಾವರಿ ಮೂಲಕ ಕಡಿಮೆ ನೀರಿನ ಬಳಕೆಯಿಂದ ಈ ಬೆಳೆ ಬೆಳೆಯಬಹುದಾಗಿದೆ. ಬೇರೆ ಹೂವುಗಳಂತೆ ಸೂರ್ಯನ ಬೆಳಕಿಗೆ ಬೇಗ ಬಾಡುವುದಿಲ್ಲ ಎಂದರು.

ಅರ್ಕಾ ಶ್ರಾವ್ಯ ಕನಕಾಂಬರ ತಳಿಯ ಮೂಲಕ ಕನಕಾಂಬರದ ಗೊಂಚಲು ಸಿದ್ದಪಡಿಸಿ ಕಛೇರಿ, ಮನೆ, ಸಭೆ ಸಮಾರಂಭಗಳಲ್ಲಿ ಅಲಂಕಾರಿಕವಾಗಿ ಬಳಸಬಹುದಾದದ್ದರಿಂದ ಈ ರೀತಿಯಾಗಿ ಹೊಸ ಮಾರುಕಟ್ಟೆ ಸೃಷ್ಠಿಸಿ ಬೆಳೆಯ ಮೌಲ್ಯವನ್ನು ಹೆಚ್ಚಿಸಬಹುದು ಎಂದು ಡಾ.ಅಶ್ವತ್ ವಿವರಿಸಿದರು.

key words : Mandya-farmers-Lap-Filled-IIHR-Arca Chenna-Kanakambara