10 ರೂ. ಪಾರ್ಕಿಂಗ್ ಶುಲ್ಕಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು:ಮೇ-11:(www.justkannada.in) ಕೇವಲ 10 ರೂ ಪಾರ್ಕಿಂಗ್ ಶುಲ್ಕಕ್ಕಾಗಿ ಚಿತ್ರಮಂದಿರದ ಸಿಬ್ಬಂದಿ ಜತೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಸೇಂಟ್‌ ಜಾನ್ಸ್‌ ರಸ್ತೆಯ ಲಾವಣ್ಯ ಚಿತ್ರಮಂದಿರದಲ್ಲಿ ನಡೆದಿದೆ.

ಭರಣೀಧರನ್‌(38) ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಪುಲಕೇಶಿನಗರದ ಸೆಲ್ವರಾಜ್‌(42) ಮತ್ತು ಶೇಖರ್‌ (20) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಭರಣಿಧರನ್, ಗುರುವಾರ ಸಂಜೆ 4.30ರ ಸುಮಾರಿಗೆ ಭಾರತಿನಗರದ ಸೇಂಟ್‌ ಜಾನ್ಸ್‌ ರಸ್ತೆಯಲ್ಲಿರುವ ಲಾವಣ್ಯ ಚಿತ್ರಮಂದಿರಕ್ಕೆ ಕಾಂಚನಾ-3 ಸಿನಿಮಾ ವೀಕ್ಷಣೆಗೆ ಹೋಗಿದ್ದರು. ಸಿನಿಮಾ ನೋಡಿಕೊಂಡು ಹೊರಗೆ ಬಂದು ಪಾರ್ಕಿಂಗ್‌ ಜಾಗದಿಂದ ಬೈಕ್‌ ತೆಗೆಯುತ್ತಿದ್ದರು. ಈ ವೇಳೆ ಪಾರ್ಕಿಂಗ್‌ನ ಸಿಬ್ಬಂದಿ ಸೆಲ್ವಕುಮಾರ್‌ ಅಲ್ಲಿಗೆ ಬಂದು 10 ರೂ. ಪಾರ್ಕಿಂಗ್‌ ಶುಲ್ಕ ನೀಡುವಂತೆ ಕೇಳಿದ್ದ. ಶುಲ್ಕ ಕೊಡಲು ನಿರಾಕರಿಸಿದ ಭರಣಿಧರಣ್, ಸೆಲ್ವರಾಜ್‌ ಮೇಲೆ ಹಲ್ಲೆ ಮಾಡಿದ್ದ. ಬಳಿಕ ಸೆಲ್ವರಾಜ್, ಚಿತ್ರಮಂದಿರದ ಒಳಗೆ ಹೋಗಿ ಹೌಸ್‌ ಕೀಪಿಂಗ್‌ ಕೆಲಸ ಮಾಡುವ ಶೇಖರ್‌ ಎಂಬಾತನನ್ನು ಕರೆದುಕೊಂಡು ಬಂದಿದ್ದಾನೆ. ನಂತರ ಇಬ್ಬರು ಸೇರಿ ಭರಣಿಧರನ್ ನನ್ನು ಚಿತ್ರಮಂದಿರದೊಳಕ್ಕೆ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ.

ತೀವ್ರವಾಗಿ ಪೆಟ್ಟು ತಿಂದ ಭರಣಿಧರನ್ ಸ್ಥಳದಲ್ಲೆ ಕುಸಿದು ಬಿದ್ದು ಪ್ರಜ್ಞಾಹೀನನಾಗಿದ್ದಾನೆ. ಆತಂಕಗೊಂಡ ಚಿತ್ರಮಂದಿರದ ಸಿಬ್ಬಂದಿ, ಭರಣಿಯನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಪಾಸಣೆ ಮಾಡಿದ ವೈದ್ಯರು, ಈಗಾಗಲೇ ಭರಣಿಧರನ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಕುಡಿದ ಅಮಲಿನಲ್ಲಿದ್ಧ ಭರಣಿಧರನ್ ಥಳಿತಕ್ಕೊಳಗಾದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧಿಸಿದಂತೆ ಭರಣಿ ತಂದೆ ವೈಕುಂಠೇಶ್ವರನ್‌ ಅವರು ಭಾರತಿ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಚಿತ್ರರಂಗದಲ್ಲಿ ಕೆಲಸಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಪೊಲಿಸರು ಬಂಧಿಸಿದ್ದಾರೆ.

10 ರೂ. ಪಾರ್ಕಿಂಗ್ ಶುಲ್ಕಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ
Man killed for refusing to Rs 10 for parking