ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಗಾಂಧಿ ಹೆಸರು ಬಗ್ಗೆ ಬಜೆಟ್ ನಲ್ಲಿ ಘೋಷಣೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜನವರಿ,27,2026 (www.justkannada.in): ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಗಾಂಧಿ ಹೆಸರು ಇಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದರು.

ಫ್ರೀಡಂಪಾರ್ಕ್ ನಲ್ಲಿ “ಮನರೇಗಾ ಬಚಾವೋ ಆಂದೋಲನದಲ್ಲಿ ಪಾಲ್ಗೊಂಡು  ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ,  ನರೇಗಾ ಯೋಜನೆಯ ಪುನರ್ ಸ್ಥಾಪನೆ ಹಾಗೂ ವಿಬಿ ಜಿ ರಾಮ್ ಜಿ ಯ ರದ್ದತಿಯನ್ನು ಒತ್ತಾಯಿಸಿ, ರಾಜಭವನಕ್ಕೆ ಮನವಿಯನ್ನು ತಲುಪಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪಾದಯಾತ್ರೆ ಪ್ರಾರಂಭಿಸಲಾಗಿದ್ದು, ರಾಜ್ಯದ ಪ್ರತಿಯೊಬ್ಬರೂ ಕಾಂಗ್ರೆಸ್ ನ ಈ ಉದ್ದೇಶಕ್ಕೆ ಸಹಕರಿಸಬೇಕು. ಮುಂದಿನ ಬಜೆಟ್ ನಲ್ಲಿ ಘೋಷಣೆಯಲ್ಲಿ 6000 ಗ್ರಾಮ ಪಂಚಾಯತಿಗಳ ಕಚೇರಿಗೂ ಮಹಾತ್ಮಾ ಗಾಂಧಿಯವರ ಹೆಸರನ್ನು ಇಡುವ ಬಗ್ಗೆ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಮಹಾತ್ಮಗಾಂಧಿ ಹೆಸರು ಕೇಳಿದರೆ ಇವರಿಗೆ ಆಗಲ್ಲ. ದುರುದ್ದೇಶದಿಂದ ಮನ್ ರೇಗಾ ಹೆಸರು ಬದಲಾವಣೆ ಮಾಡಿ ‘ವಿಬಿ ಜೀ ರಾಮ್ ಜೀ’ ಜಾರಿ ಮಾಡಿದ್ದಾರೆ. ಮನ್ ರೇಗಾ ಯೋಜನೆಯಲ್ಲಿ ರಾಮ ಅನ್ನೋ ಹೆಸರು ಬರುವ ರೀತಿ ಯೋಜನೆ ಮಾಡಿದ್ದಾರೆ.  ದಶರಥ ರಾಮ ಇಲ್ಲ ಕೌಶಲ್ಯ ರಾಮ ಇಲ್ಲ ಸೀತಾ ರಾಮ ಸಹ ಇಲ್ಲ.  ಈ ಕಾಯ್ದೆಯಲ್ಲಿ ರಾಮ ಇಲ್ಲ.  ಬಡವರು ದಲಿತರು, ರೈತರ ಬಗ್ಗೆ ಚಿಂತಿಸುವುದು ಕಾಂಗ್ರೆಸ್ ಮಾತ್ರ.  ಬಡವರ ಬಗ್ಗೆ ಮಾತಾಡುವುದು ಕಾಂಗ್ರೆಸ್ ಮಾತ್ರ  ಎಂದು ಹರಿಹಾಯ್ದರು.

RSS ಮಾರ್ಗದರ್ಶನದಂತೆ ಬಡವರ ಕಾರ್ಯಕ್ರಮಗಳನ್ನ ಬಿಜೆಪಿಯವರು ರದ್ದು ಮಾಡಿದ್ದಾರೆ. ಆರ್ ಎಸ್ ಎಸ್ ನವರಿಗೆ ಬಡವರು ಮುಖ್ಯವಾಹಿನಿಗೆ ಬರುವುದು ಬೇಕಾಗಿಲ್ಲ. ಬಡವರು ಬಡವರಾಗಿಯೇ ಉಳಿದು ಸದಾಕಾಲ ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ ಸಿದ್ಧಾಂತ. ಬಡವರ ವಿರೋಧಿ ಬಿಜೆಪಿ ಬಡವರ ಪರವಾದ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದರು.

ಬಡವರ ಕೆಲಸವನ್ನು ದಿಲ್ಲಿಯಲ್ಲಿ ನಿರ್ಧರಿಸುವುದು ತಪ್ಪು

ಬಿಜೆಪಿಯವರು ಕಾಂಗ್ರೆಸ್ ನ ಜನಪರ ಗ್ಯಾರಂಟಿ ಯೋಜನೆಗಳ ಬಗ್ಗೆ ‘ವೋಟ್ ಗಾಗಿ ಮಾಡಿದ ಯೋಜನೆಗಳು’ ಎಂದು ಟೀಕಿಸುತ್ತಿದ್ದರು. ಮಹಿಳೆಯರಿಗೆ, ದಲಿತರಿಗೆ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸಣ್ಣ ರೈತರು ನರೇಗಾ ಯಿಂದ ವರ್ಷದ ಯಾವುದೇ ದಿನಗಳಲ್ಲಿ ಕೆಲಸ ಮಾಡಬಹುದಿತ್ತು. ಗ್ರಾಮಸಭೆಗಳು ಹಾಗೂ ಗ್ರಾಮ ಪಂಚಾಯತಿಗಳು ಈ ಮೊದಲು ಕೆಲಸವನನ್ನು ನಿರ್ಧರಿಸಲಾಗುತ್ತಿತ್ತು. ಆದರೆ ಈಗ  ಬಡವರ  ಗ್ರಾಮೀಣ ಬಡಜನರ ಕೆಲಸವನ್ನು ಸ್ಥಳೀಯ ಗ್ರಾಮೀಣ ಆಡಳಿತ ಬಿಟ್ಟು , ದಿಲ್ಲಿಯಲ್ಲಿ ನಿರ್ಧರಿಸಲಾಗುತ್ತದೆ ಎಂದರು.

ಮನರೇಗಾ ದಿಂದ 100 ದಿನಗಳ ಕೆಲಸದ ಭರವಸೆಯಿತ್ತು

ಎಲ್ಲ ಗ್ರಾಮಪಂಚಾಯತಿಗಳಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕೆಲಸ ಸಿಗುವ ಅವಕಾಶವಿಲ್ಲ. ನರೇಗಾ ಯೋಜನೆಯಿಂದ, ಹಿಂದೆ ಕೂಲಿಗಾರರಿಗೆ 100 ದಿನಗಳ ಕೆಲಸ ಖಾತ್ರಿಯಾಗಿ ಸಿಗುತ್ತಿತ್ತು.  ಬಡವರ ಕೆಲಸದ ಹಕ್ಕು ಸಂವಿಧಾನಬದ್ಧವಾದದ್ದು, ಆದರೆ ವಿಬಿ ರಾಮ್ ಜಿ ಯ ಜಾರಿಯಿಂದ ಈ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಈ ಹಿಂದೆ ನರೇಗಾ ಅಡಿಯಲ್ಲಿ ವೆಚ್ಚಮಾಡಲಾಗುವ ಅನುದಾನವನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಈಗ ಈ ಅನುದಾನವನ್ನು ನಿಲ್ಲಿಸಲಾಗಿದ್ದು, ಕೇಂದ್ರದ ಈ ಹೊಸ ಕಾಯ್ದೆಯಂತೆ ಶೇ. 40 ರಷ್ಟು ರಾಜ್ಯ ಸರ್ಕಾರಗಳು ಕೊಟ್ಟು, ಕೇಂದ್ರ ಶೇ. 60 ರಷ್ಟು ಮಾತ್ರ ಪಾವತಿಸುತ್ತವೆ ಎಂದರು.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ

ಕೇಂದ್ರದ ಇಂತಹ ಜನವಿರೋಧಿ ನೀತಿಯಿಂದ ಹಲವು ರಾಜ್ಯಗಳು ಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ನಮ್ಮ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ, ಕೇಂದ್ರದ ನೀತಿಯ್ನು ಪ್ರತಿಭಟಿಸುತ್ತಿದೆ. ಈ ಕಾಯ್ದೆಯನ್ನು ರದ್ದುಪಡಿಸಿ, ಪುನ: ನರೇಗಾ ವನ್ನು ಪುನರ್ ಸ್ಥಾಪಿಸುವವರೆಗೂ  ಇಡೀ ದೇಶದ ಜನರು ಈ ಹೋರಾಟ ಮುಂದುವರೆಸಬೇಕಿದೆ. ಈ ಬಾರಿ ರೈತರು, ಕಾರ್ಮಿಕರು, ಮಹಿಳೆಯರು ಈ ಹೋರಾಟದಲ್ಲಿ  ಕೈಜೋಡಿಸಲಿದ್ದಾರೆ ಎಂದರು.

ವಿಬಿ ಜಿ ರಾಮ್ ಜಿ  – ಆರ್ ಎಸ್ ಎಸ್ ಹುನ್ನಾರ

ವಿಬಿ ಜಿ ರಾಮ್ ಜಿ  ಎಂದ ಕಾಯ್ದೆ ಬಡವರ ಹಕ್ಕನ್ನು ರಕ್ಷಿಸುವುದಿಲ್ಲ. ಈ ಹುನ್ನಾರದ ಹಿಂದೆ ಆರ್ ಎಸ್ ಎಸ್ ಇದೆ. ಬಡವರು ಬಲಯುತರಾಗದೇ, ಸೇವಕರಾಗಿಯೇ ಇರಬೇಕೆಂಬ ಕುತಂತ್ರ ಅವರದ್ದಾಗಿದೆ. ಸಮಾಜದಲ್ಲಿ ಅಸಮಾನತೆಯನ್ನು ಶಾಶ್ವತವಾಗಿಸುವುದೇ ಅರ್ ಎಸ್ ಎಸ್  ಹುನ್ನಾರ ಎಂದರು.

ನರೇಗಾ ರದ್ಧತಿ ಬಗ್ಗೆ ವಿಶೇಷ ಅಧಿವೇಶನ- ಬಿಜೆಪಿ ಚರ್ಚಿಸುತ್ತಿಲ್ಲ

ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ದೇಶದಲ್ಲಿ ಸಮಾನತೆ ಸ್ಥಾಪನೆಯಾಗಿಸಲು ಆರ್ಥಿಕ ,ಸಾಮಾಜಿಕ ಸ್ವಾತಂತ್ರ್ಯ  ಎಲ್ಲರಿಗೂ ದೊರೆಯಬೇಕು. ಮಹಾತ್ಮಾ ಗಾಂಧಿಯವರು ಗ್ರಾಮ ಸ್ವರಾಜ್ಯ ಪ್ರತಿಪಾದಿಸಿದರು. ಗೋಡ್ಸೆಯವರು ಮಹಾತ್ಮಾಗಾಂಧಿಯವರ ಹತ್ಯೆಯನ್ನು ಮಾಡಿದರೆ, ಬಿಜೆಪಿಯವರು ನರೇಗಾ ಯೋಜನೆಯನ್ನು ರದ್ದುಗೊಳಿಸುವ ಮೂಲಕ, ಮಹಾತ್ಮಾ ಗಾಂಧಿಯವರನ್ನು ಮತ್ತೊಮ್ಮೆ ಹತ್ಯೆ ಮಾಡಿದಂತಾಗಿದೆ. ಬಿಜೆಪಿಯವರು ಈಗ ಸುಳ್ಳು ಹೇಳುತ್ತಿದ್ದಾರೆ . ಈ ಕಾಯ್ದೆಯ ರದ್ದತಿಯ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಆದರೆ ಬಿಜೆಪಿಯವರು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಆದರೆ ರದ್ದತಿಯ ವಿರುದ್ಧ ಸರ್ಕಾರ ಖಂಡಿತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.

Key words: gram panchayats, named, Mahatma Gandhi, CM Siddaramaiah