ಎಂ.ಟಿ.ಬಿ ನಾಗರಾಜ್ ಮನವೊಲಿಕೆ ಯಶಸ್ವಿ: ರಾಜೀನಾಮೆ ವಾಪಸ್ ಗೆ ಟೈಂ ತಗೊಂಡು ನಿರ್ಧಾರ ಮಾಡುತ್ತೇನೆ ಎಂದ ಶಾಸಕ

ಬೆಂಗಳೂರು:ಜುಲೈ-13:(www.justkannada.in) ರಾಜ್ಯ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಸತತ ಯತ್ನ ನಡೆಸೆತ್ತಿದ್ದು, ರಾಜೀನಾಮೆ ವಾಪಸ್ ಪಡೆಯುವ ನಿಟ್ಟಿನಲ್ಲಿ ಹಿರಿಯ ಶಾಸಕ ಎಂ.ಟಿ.ಬಿ ನಾಗರಾಜ್ ಮನವೊಲಿಕೆ ಯತ್ನ ಬಹುತೇಕ ಯಶಸ್ವಿಯಾಗಿದೆ.

ಸಚಿವ ಡಿ.ಕೆ ಶಿವಕುಮಾರ್, ಡಿಸಿಎಂ ಪರಮೆಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರು ಅತೃಪ್ತ ಶಾಸಕ ಎಂ.ಟಿ.ಬಿ ನಾಗರಾಜ್ ಅವರ ನಿವಾಸಕ್ಕೆ ತೆರಳಿ, ರಾಜೀನಾಮೆ ವಾಪಸ್ ಪಡೆಯುವಂತೆ, ಪಕ್ಷ ಬಿಟ್ಟು ಹೋಗದಂತೆ ಮನವಿ ಮಾಡಿದ್ದಾರೆ. ಆರಂಭದಲ್ಲಿ ಒಪ್ಪದ ನಾಗರಾಜ್ ಅಂತಿಮವಾಗಿ ರಾಜೀನಾಮೆ ವಾಪಸ್ ಪಡೆಯಲು ಸಮಯಾವಕಾಶ ಕೇಳಿದ್ದು, ರಾಜೀನಾಮೆ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್ ನಾಯಕರ ಭೇಟಿ ಬಳಿಕ ಮಾತನಾಡಿದ ಎಂ.ಟಿ.ಬಿ ನಾಗರಾಜ್, ಅಸಮಾಧಾನ ಇಲ್ಲದಿರುವ ಪಕ್ಷಗಳೇ ಇಲ್ಲ. ಎಲ್ಲಾ ಪಕ್ಷಗಳಲ್ಲೂ ಅಸಮಾಧಾನ ಇದೆ. ಎಲ್ಲರೂ ಸಮಾಧಾನದಿಂದ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಕಾಂಗ್ರೆಸ್ ನಾಯಕರು ಸತತ ನಮ್ಮ ಮನವೊಲಿಕೆ ಯತ್ನ ಮಾಡಿದ್ದಾರೆ. ನೀವು 40 ವರ್ಷದಿಂದ ಸತತವಾಗಿ ಕಾಂಗ್ರೆಸ್ ಪಕ್ಷದಿಂದ ಕೆಲಸ ಮಾಡಿದ್ದೀರಿ. ನೀವು ಇಲ್ಲೆ ಉಳಿದುಕೊಳ್ಳಬೇಕು. ಕಾಂಗ್ರೆಸ್ ಬಿಟ್ಟು ಹೋಗಬಾರದು ಎಂದು ಮನವೊಲಿಸಲು ಯತ್ನಿಸಿದ್ದಾರೆ. ಹಾಗಾಗಿ ನಾವೆಲ್ಲ ಇದೇ ಪಕ್ಷದಲ್ಲಿ ಇರುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಸುಧಾಕರ್ ಅವರನ್ನೂ ಮನವೊಲಿಸುವ ನಿಟ್ಟಿನಲ್ಲಿ ಯತ್ನ ಮಾಡುತ್ತೇವೆ ಎಂದಿದ್ದಾರೆ.

ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಕೂಡ ದೂರವಾಣಿ ಮೂಲಕ ಹೇಳಿದ್ದಾರೆ. ಜೊತೆಗೆ ದಿನೇಶ್ ಗುಂಡೂರಾವ್ ಕೂಡ ಮಾತನಾಡಿದ್ದಾರೆ. ಎಲ್ಲರು ಕೂಡ ನಮ್ಮ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ನಾನು ಕೂಡ ಅವರ ಬಳಿ ಸಮಯಾವಕಾಶ ಕೇಳಿದ್ದೇನೆ ಎಂದು ಹೇಳಿದರು.

ಎಂ.ಟಿ.ಬಿ ನಾಗರಾಜ್ ಮನವೊಲಿಕೆ ಯಶಸ್ವಿ: ರಾಜೀನಾಮೆ ವಾಪಸ್ ಗೆ ಟೈಂ ತಗೊಂಡು ನಿರ್ಧಾರ ಮಾಡುತ್ತೇನೆ ಎಂದ ಶಾಸಕ

M.T B Nagaraj,withdrawal,resignation,D K Shivakumar,DCM Parameshwar