ಬಿಜೆಪಿಗೆ ದಲಿತರನ್ನು ಕಂಡರೆ ಆಗಲ್ಲ: ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಮೂಲಕ ಹೆದರಿಸುವ ಕೆಲಸ- ಎಂ.ಲಕ್ಷ್ಮಣ್

ಮೈಸೂರು,ಮೇ,22,2025 (www.justkannada.in): ಬಿಜೆಪಿಗೆ ದಲಿತರನ್ನು ಕಂಡರೆ ಆಗಲ್ಲ. ದಲಿತ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ. ಕಾಂಗ್ರೆಸ್ ಪ್ರಭಾವಿ ನಾಯಕರ ಮೇಲೆ ಇಡಿ ದಾಳಿ ಮೂಲಕ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ವಿಚಾರ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್, ಕೇಂದ್ರ ಸರ್ಕಾರದ ಇಂತಹ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪ್ರಭಾವಿ ನಾಯಕರ ಮೇಲೆ ಇಡಿ ದಾಳಿ ಮೂಲಕ ಹೆದರಿಸುವ ಕೆಲಸ ಮಾಡುತ್ತಿದೆ. ಡಾ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಭ್ರಷ್ಟಾಚಾರ ನಡೆದರೆ ಸಂಬಂಧಿಸಿದ ಶಿಕ್ಷಣ ಇಲಾಖೆ ಮೇಲೆ ತನಿಖೆ ನಡೆಸಬೇಕು. ಆದರೆ ಇಡಿಗೆ ಈ ರೀತಿಯ ದಾಳಿ ಮಾಡಲು ಅಧಿಕಾರ ಇಲ್ಲ ಎಂದರು.

ಡಾ. ಪರಮೇಶ್ವರ್ ಅವರು ತಮ್ಮ  ತಂದೆ ಕಾಲದಿಂದಲೂ ಶಿಕ್ಷಣ ಸಂಸ್ಥೆ ನಡೆಸುತ್ತಾ ಬಂದಿದ್ದಾರೆ. ಇಡಿ ದಾಳಿ ಮಾಡಿರುವ ಬಗ್ಗೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದುವರೆಗೆ ಕೇಂದ್ರ ಸರ್ಕಾರ 28,878 ಇಡಿ ದಾಳಿ ಮಾಡಿದೆ. ಅದರಲ್ಲಿ ಕೇವಲ 992  ಪ್ರಕರಣಗಳಿಗೆ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಶಿಕ್ಷೆ ಆಗಿರುವು ಕೇವಲ 23 ಪ್ರಕರಣಗಳಲ್ಲಿ ಮಾತ್ರ. ಶೇಕಡಾ 98 ಪರ್ಸೆಂಟ್ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಿದ್ದಾರೆ. ಏಳೆಂಟು ದಲಿತ ಮುಖಂಡರನ್ನು ಲೀಸ್ಟ್ ಮಾಡಿದ್ದು, ಇವರನ್ನು ಟಾರ್ಗೆಟ್ ಮಾಡಿ ದಾಳಿ‌ ಮಾಡುವ ಸಾಧ್ಯತೆ ‌ಇದೆ. ಜಾತಿ ಗಣತಿ ವರದಿ ಬಂದರೆ ದಲಿತರು ತಮ್ಮ ಪರವಾಗಿ ಇರಲ್ಲ ಅಂತ ಹೀಗೆಲ್ಲಾ ಮಾಡುತ್ತಿದ್ದಾರೆ. ರನ್ಯಾ ರಾವ್ ವಿಚಾರದಲ್ಲಿ ಬಿಜೆಪಿ ಐಟಿ ಸೆಲ್‌ ಅಥವಾ ಇಡಿ ಅವರು ಪ್ರಚಾರ ಮಾಡಿದ್ದಾರಾ. ನಾವೆಲ್ಲರೂ ಡಾ. ಪರಮೇಶ್ವರ್ ಜೊತೆಗಿರುತ್ತೇವೆ ಎಂದರು.

ಇನ್ನು ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿರುವ ಭಾಷಣವನ್ನು ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ. ಒಬ್ಬ ಸಕ್ರೀಯ ರಾಜಕಾರಣದಲ್ಲಿರುವ ಮುತ್ಸದ್ದಿ ರಾಜಕಾರಣಿಯನ್ನ ಇಲ್ಲಿನ ಮಾಜಿ ಸಂಸದ  ಪ್ರತಾಪ್ ಸಿಂಹ ಬಾಯಿಗೆ ಬಂದಹಾಗೆ ಮಾತನಾಡಿದ್ದಾನೆ. ಇವನಿಗೆ ದಲಿತ ಸಮುದಾಯದ ಜನ ತಕ್ಕ ಬುದ್ದಿ ಕಲಿಸಬೇಕು. ಪಹಲ್ಗಾಮ್  ಅಟ್ಯಾಕ್ ಅಂತ ಮಾಡಿ ಜನರನ್ನ ಮೂರ್ಖರನ್ನಾಗಿ ಮಾಡಿದ್ರಿ. ಅಂತಹ ವಿಚಾರಗಳನ್ನ ನಾವು ಪ್ರಶ್ನೆ ಮಾಡೋದೆ ತಪ್ಪ.? ಮಾಹಿತಿ ಕೇಳೋದೆ ತಪ್ಪಾ.? ಸೀಸ್ ಫೈರ್ ಯಾವಾಗ ಯಾಕೆ ಘೋಷಣೆ ಮಾಡಿದ್ರಿ ಅಂತ ಕೇಳೋದೆ ತಪ್ಪಾ? ಪ್ರಶ್ನೆ ಮಾಡೋದ್ರೆ ನಾವು ದೇಶ ದ್ರೋಹಿಗಳಾ.? ಕೊಂದೋರು ಯಾರು ಅಂತ ಇನ್ನೂ ಕಂಡುಹಿಡಿದಿಲ್ಲ ಎಂದು ಗುಡುಗಿದರು.

ನಿನಗೆ  ನಯಾ ಪೈಸೆ ಬೆಲೆ ಇಲ್ಲ. ಬಿಜೆಪಿ ಕಚೇರಿಗೂ ಸೇರಿಸಲ್ಲ.

ಬೀದಿಯಲ್ಲಿ ನಿಂತು ಪ್ರೆಸ್ ಮೀಟ್ ಮಾಡಿ ಹೋಗ್ತೀಯಲ್ಲಪ್ಪ ಪ್ರತಾಪ್ ಸಿಂಹ. ನಿನಗೆ  ನಯಾ ಪೈಸೆ ಬೆಲೆ ಇಲ್ಲ. ಬಿಜೆಪಿ ಕಚೇರಿಗೂ ಸೇರಿಸಲ್ಲ. ನಾನು ಐದು ಬಾರಿ ಸೋತಿದ್ರೂ ನಾನು ಕಾಂಗ್ರೆಸ್ ಕಚೇರಿಯಲ್ಲಿ ಕೂತು ಪ್ರೆಸ್ ಮೀಟ್ ಮಾಡುತ್ತೇನೆ. ನನಗೆ ನಮ್ಮ ಪಕ್ಷದ ಮುಖಂಡರು ಬೆಲೆ‌ ಕೊಡ್ತಾರೆ. ನಿನಗೆ ಬಿಜೆಪಿ ಕಚೇರಿಯಲ್ಲಿ ಕೂರಲು ನಿನಗೆ ಜಾಗ ಕೊಡಲ್ಲ. ನಿನಗೆ ಮೂರು ಕಾಸಿನ ಬೆಲೆ ಕೊಡಲ್ಲ. ನೀನು ಅಚಾನಕ್ಕಾಗಿ ಎರಡು ಬಾರಿ ಗೆದ್ದು ಬಂದಿದ್ದೀಯಾ. ನೀನು ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತೀಯಾ.? ಅವರ ರಾಜಕೀಯ ಅನುಭವದಷ್ಟು ನಿನಗೆ ವಯಸ್ಸಾಗಿಲ್ಲ ನೀನು ಅವರ ಬಗ್ಗೆ ಮಾತನಾಡುತ್ತೀಯಾ? ಎಂದು  ಪ್ರತಾಪ್ ಸಿಂಹ  ವಿರುದ್ಧ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹರಿಹಾಯ್ದರು.

Key words:  ED, raids, Congress leaders, M. Laxman