ರಾಜ್ಯ ಬಜೆಟ್ ಸುಸ್ಥಿರ ಬೆಳವಣಿಗೆಗೆ ಪ್ರಾಯೋಗಿಕ ನೀಲನಕ್ಷೆ: ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ ಬಾಲಕೃಷ್ಣ

ಬೆಂಗಳೂರು,ಮಾರ್ಚ್,7,2025 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಆಯವ್ಯಯವನ್ನು ಎಫ್‌ ಕೆಸಿಸಿಐನ ಅಧ್ಯಕ್ಷ ಎಂ.ಜಿ ಬಾಲಕೃಷ್ಣ ಅವರು ಸ್ವಾಗತಿಸಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಎಂ.ಜಿ ಬಾಲಕೃಷ್ಣ, ಈ ಬಜೆಟ್‌ ಸುಮಾರು ನಾಲ್ಕು ಲಕ್ಷ ಕೋಟಿ ರೂಗಳ ಬಜೆಟ್‌ ಆಗಿದ್ದು, ಇದು ಅವರ ಆರ್ಥಿಕ ಚಿಂತನೆಯನ್ನು ಪ್ರತಿಫಲಿಸುತ್ತದೆ. ಬೆಂಗಳೂರು ಮೆಟ್ರೋ ರೈಲನ್ನು ದೇವನಹಳ್ಳಿಯವರೆಗೆ ವಿಸ್ತರಿಸಿರುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಬ್ರಾಂಡ್ ಬೆಂಗಳೂರು ಅಡಿಯಲ್ಲಿ ಸುರಂಗ ಯೋಜನೆಗಳು ನಗರ ಸಂಚಾರವನ್ನು ಹೆಚ್ಚಿಸಿ, ದಟ್ಟಣೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದಿದ್ದಾರೆ.

ಕೈಗಾರಿಕಾ ಮತ್ತು ವ್ಯಾಪಾರ ವಲಯಗಳನ್ನು ಉತ್ತೇಜಿಸುವ ಪ್ರಮುಖ ಕ್ರಮಗಳೆಂದರೆ ಹೈಬ್ರಿಡ್ ವಾಹನಗಳಿಗೆ ತೆರಿಗೆ ವಿನಾಯಿತಿ ಮತ್ತು ಜಾಗತಿಕ ಸುಸ್ಥಿರತೆಯ ಪ್ರವೃತ್ತಿಗಳಿಗೆ ಅನುಗುಣವಾಗಿ ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಪ್ರೋತ್ಸಾಹಕಗಳು ಮತ್ತು ಸ್ವಚ್ಛ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು ಹಾಗೂ ಇವಿ ಕ್ಲಸ್ಟರ್‌ ಸ್ಥಾಪನೆಗೆ ಇಪ್ಪತ್ತೈದು ಕೋಟಿ ರೂ. ಕೊಟ್ಟಿರುವುದು ಒಳ್ಳೆಯ ಕ್ರಮವಾಗಿದೆ ಎಂದು ಶ್ಲಾಘಿಸಿದ್ದಾರೆ.

ವಿವಿಧ ಜಿಲ್ಲೆಗಳಿಗೆ ಉದ್ದೇಶಿತ ಹಂಚಿಕೆಯೊಂದಿಗೆ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಬಜೆಟ್ ಒತ್ತು ನೀಡುತ್ತದೆ. ರಾಜ್ಯದಾದ್ಯಂತ ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿನ ಹೂಡಿಕೆಗಳನ್ನು ಸಮಾನ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು, ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ನಿವಾಸಿಗಳ ಒಟ್ಟಾರೆ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ, ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ನಿಖರವಾದ ಯೋಜನೆ ಮತ್ತು ಸಮನ್ವಯದ ಅಗತ್ಯವಿದೆ.

ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಪ್ರತ್ಯೇಕ ಎಂಎಸ್ಎಂಇ  ನೀತಿಯನ್ನು ರೂಪಿಸುವ ಕ್ರಮವನ್ನು ಎಫ್‌ ಕೆಸಿಸಿಐ ಸ್ವಾಗತಿಸುತ್ತದೆ. ಇದು ಆರ್ಥಿಕತೆಯನ್ನು ವೇಗಗೊಳಿಸುತ್ತದೆ ಮತ್ತು ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡಿದಂತಾಗುತ್ತದೆ. ಈ ಪ್ರತ್ಯೇಕ ನೀತಿಯು ರೂಪಿಸಬೇಕೆಂದು ಎಫ್.ಕೆ.ಸಿ.ಸಿ.ಐ. ಸರ್ಕಾರಕ್ಕೆ ಒತ್ತಾಯ ಮಾಡುತ್ತಿತ್ತು, ನಮ್ಮ ಮನವಿಯನ್ನು ಸರ್ಕಾರವು ಪರಿಗಣಿಸಿದ್ದು ನಾವು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ  ಎಂದು ತಿಳಿಸಿದ್ದಾರೆ.

ವಿಸ್ತಾರವಾದ ಬಜೆಟ್ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದರೂ, ದೀರ್ಘಾವಧಿಯ ಆರ್ಥಿಕ ಅಸಮತೋಲನವನ್ನು ತಡೆಯಲು ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಒಂದು ಟ್ರಿಲಿಯನ್‌ ಆರ್ಥಿಕ ರಾಜ್ಯವಾಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇರಿಸಿರುವ ನಮ್ಮ ಮುಖ್ಯಮಂತ್ರಿಗಳು ಸರ್ವ ಜನರ ಅಭಿವೃದ್ಧಿಗಾಗಿ ಸಮ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂಕಲ್ಪ ತೊಟ್ಟಿದ್ದು ಎಲ್ಲರಿಗೂ ಅನುಕೂಲವಾಗುವಂತಹ ಸರ್ವಜನರ ಹಿತದೃಷ್ಟಿಯಿಂದ ಬಜೆಟ್‌ ಅನ್ನು ಮಂಡಿಸಿದ್ದಾರೆ ಎಂದು ಎಂ.ಜಿ ಬಾಲಕೃಷ್ಣ ಹೊಗಳಿದ್ದಾರೆ.

Key words: State budget, practical blueprint, sustainable growth, M.G. Balakrishna