ಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ- ಡಾ. ಮಾನಸ

ಮಂಡ್ಯ, ಫೆಬ್ರವರಿ,2,2026 (www.justkannada.in): ಪುಸ್ತಕ ಮನೆ ಸ್ಥಾಪನೆ ಮಾಡಿ ಇಪ್ಪತ್ತು ಭಾಷೆಯ ಇಪ್ಪತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿ ವಿಶಿಷ್ಟ ಸಾಧನೆ ಮಾಡಿರುವ ಅಂಕೇಗೌಡ ಪುಸ್ತಕ ಪ್ರೀತಿ ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಹೇಳಿದ್ದಾರೆ.

ಇಂದು ಪಾಂಡವಪುರದ ಹರಳಹಳ್ಳಿಯಲ್ಲಿರುವ ಪುಸ್ತಕ ಮನೆಯಲ್ಲಿ 2026 ನೇ ಸಾಲಿನ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಎಂ. ಅಂಕೇಗೌಡ ಅವರನ್ನು ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವ ಸಮರ್ಪಣೆ ಮಾಡಿ ಡಾ.ಮಾನಸ ಮಾತನಾಡಿದರು.

ನಾವು ಪುಸ್ತಕ ಪ್ರೀತಿಯನ್ನು ಉತ್ತೇಜಿಸುವ ಸಲುವಾಗಿ ಪ್ರಾಧಿಕಾರದ ವತಿಯಿಂದ ಮನೆಗೊಂದು ಗ್ರಂಥಾಲಯ ಯೋಜನೆ ಆರಂಭಿಸಿದ್ದೇವೆ. ಆದರೆ ಅಂಕೇಗೌಡರ ಮನೆಯ ಈ ಗ್ರಂಥಾಲಯ ನಿಬ್ಬೆರಗಾಗಿಸುವಂತಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಪುಸ್ತಕಗಳನ್ನು ಒಬ್ಬ ವ್ಯಕ್ತಿ ತನ್ನ ಸ್ವಂತ ಪರಿಶ್ರಮ ಮತ್ತು ಆಸಕ್ತಿಯಿಂದ ಸಂಗ್ರಹ ಮಾಡಿರುವುದು ಅತ್ಯಂತ ಅಚ್ಚರಿಯ ಸಂಗತಿ .ಅವರ ಈ ಸಾಧನೆ ಶಾಶ್ವತವಾಗಿ ಉಳಿಯುತ್ತದೆ. ಇದರ ಮೂಲಕ ಜ್ಞಾನದ ತಳಹದಿಯ ಮೇಲೆ ದೇವಾಲಯ ಕಟ್ಟುವುದು ಹೇಗೆ ಎಂಬುದನ್ನು ಅಂಕೇಗೌಡರು ತೋರಿಸಿಕೊಟ್ಟಿದ್ದಾರೆ.   ಜನ ದೇವಾಲಯಗಳಿಗೆ ಮತ್ತು ತಮ್ಮ ಭಕ್ತಿಯ ಕಾಣಿಕೆಗಾಗಿ ಖರ್ಚು ಮಾಡುವ ಶೇಕಡಾ 10%ರಷ್ಟನ್ನಾದರು ಪುಸ್ತಕ ಕೊಂಡುಕೊಳ್ಳಲು ಉಪಯೋಗಿಸಿದ್ದಲ್ಲಿ ಪುಸ್ತಕ ಲೋಕದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ಅಂಕೇಗೌಡರ ಅಂತಿಮ ಕಾಲದಲ್ಲಿ ಯಾರು ಬರಲಿ, ಬಿಡಲಿ ,ಸರ್ಕಾರ ಅವರ ಮನೆ ಮುಂದೆ ಇರುತ್ತದೆ. ಅವರ ಸಾಧನೆಗೆ ಸಂದಗೌರವ ಇದಾಗಿದೆ ಎಂದು ಡಾ.ಮಾನಸ ತಿಳಿಸಿದರು.

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅಂಕೇಗೌಡರು, ತಮ್ಮ ಹಿಂದಿನ ದಿನಗಳನ್ನು ನೆನೆದು ಭಾವುಕರಾದರು. ತಾವು ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡುತಿದ್ದ ದಿನಗಳಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡ ಅವರು ನಂತರ ಆ ಕೆಲಸ ತೊರೆದು ಪಾಂಡವಪುರದ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿ ಪುಸ್ತಕ ಮನೆ ಸ್ಥಾಪಿಸಿದ ಸಂದರ್ಭವನ್ನು ಕುರಿತು ವಿವರಿಸಿದರು. ಈ ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿಡುವುದೇ ನನ್ನ ದೊಡ್ಡ ಕನಸು ಎಂದ ಅವರು ಇಲ್ಲಿಗೆ ಬರುವ ಸಂಶೋಧನಾ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಹಾಗೂ ತಂಗಲು ಕಟ್ಟಡವೊಂದರ ಅವಶ್ಯಕತೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯ ಆಯುಕ್ತ ಹೆಚ್. ಬಸವರಾಜೇಂದ್ರ ಅವರು ಸಹ ಉಪಸ್ಥಿತರಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಹಾಗೂ ಖ್ಯಾತ ಪತ್ರಕರ್ತ ,ಬರಹಗಾರ ರಾಜಶೇಖರ ಕದಂಬ, ರಾಮಣ್ಣ, ತಿಪ್ಪಣ್ಣ ಹಾಗೂ ಶ್ರೀನಿವಾಸ ಕರಿಯಪ್ಪ ಅವರು ಸಮಾರಂಭದಲ್ಲಿ ಭಾಗಿಯಾಗಿದ್ದರು.

Key words: M. Ankegowda, books, role model, Dr. Manasa