ಕಾಲುವೆಗೆ ತಳ್ಳಿ ಪ್ರೇಯಸಿ ಕೊಂದ ಪ್ರಿಯಕರ..?

ಶಿವಮೊಗ್ಗ, ಸೆಪ್ಟೆಂಬರ್​ 24,2025 (www.justkannada.in):  ಮದುವೆ ವಿಚಾರಕ್ಕೆ ಜಗಳವಾಗಿ ಪ್ರೇಯಸಿಯನ್ನೇ ಪ್ರಿಯಕರ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಯಕ್ಕುಂದ ಗ್ರಾಮದ ಬಳಿಯ ಭದ್ರಾ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಪ್ರೇಯಸಿ ಸ್ವಾತಿಯನ್ನು ಸೂರ್ಯ ಭದ್ರಾ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಕೊಲೆಯ ಬಳಿಕ ಸೂರ್ಯ ತಾನೂ ವಿಷ  ಸೇವಿಸಿ  ಆತ್ಮಹತ್ಯೆಗೆ ಯತ್ನಿಸಿದ್ದ. ಇದೀಗ ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಸೂರ್ಯ ಮತ್ತು ಸ್ವಾತಿ ಇಬ್ಬರು ನಾಲ್ಕು ವರ್ಷಗಳಿಂದ  ಪ್ರೀತಿಸುತ್ತಿದ್ದರು. ಸ್ವಾತಿ ಪದವಿ ಎರಡನೇ ವರ್ಷ ವ್ಯಾಸಾಂಗ ಮಾಡುತ್ತಿದ್ದಳು. ಸೂರ್ಯ ಮದುವೆ ಆಗುವುದಕ್ಕೆ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಆದರೆ ಇತ್ತ ಸ್ವಾತಿ ಮನೆಯವರು ಓದು ಮುಗಿಯುವವರೆಗೆ ಮದುವೆ ಬೇಡ ಅಂದಿದ್ದಾರೆ. ಸೆ. 21 ರಂದು ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಕೂಡ ನಡೆದಿತ್ತು.

ಸೆ.21ರಂದು ಸ್ವಾತಿಯನ್ನು ಸೂರ್ಯ ಮನೆಯಿಂದ ಭದ್ರಾ ಕಾಲುವೆಗೆ ಕರೆದೊಯ್ದು ಅಲ್ಲಿಂದ ತಳ್ಳಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಯುವತಿಯ ಶವ ಪತ್ತೆಯಾಗಿದ್ದು,  ಸ್ವಾತಿ ಕುಟುಂಬಸ್ಥರು ಈ ಕುರಿತು ದೂರು ನೀಡಿದ್ದರು. ಭದ್ರಾವತಿ ಗ್ರಾಮಾಂತರ ಪೊಲೀಸರು ಸೂರ್ಯ ಮತ್ತು ಸ್ವಾಮಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

Key words:  lover, killed, canal, Shimoga