ಮೈಸೂರು,ಆಗಸ್ಟ್,31,2025 (www.justkannada.in): ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಆಗಸ್ಟ್ 31 ರಂದು ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’ ನಾಟಕ ಪ್ರದರ್ಶನಗೊಳ್ಳಲಿದೆ.
ನಟನ ರಂಗಶಾಲೆಯಲ್ಲಿ ಮತ್ತು ಬುಕ್ ಮೈಶೋನಲ್ಲಿ ಟಿಕೆಟ್ ಲಭ್ಯವಿರಲಿದೆ. ಬಾಲ್ಯದ ಮುಗ್ಧತೆ, ಯೌವನದ ತುಂಟಾಟ, ಪ್ರೌಢಾವಸ್ಥೆಯ ಏಳುಬೀಳುಗಳು. ಇವುಗಳ ಮಧ್ಯೆ ಮೂಡುವ ಗೆಳೆತನ, ಅರಳುವ ಪ್ರೀತಿ, ಕಾಡುವ ನೆನಪು, ಅಗಲಿಕೆ , ಸಂತಸ, ನೋವು..ಇವೆಲ್ಲವೂ ನಿಮ್ಮ ಪತ್ರಗಳಲ್ಲಿ ದಾಖಲಾಗಿದ್ದರೆ?! ಒಂದಿಡೀ ಜೀವನದ ಪಿಸುಮಾತುಗಳು, ಹಂಚಿಕೊಂಡ ಗುಟ್ಟುಗಳು , ಜೊತೆಗೆ ಕಂಡ ಕನಸುಗಳು, ಖುಷಿಯ ಚೀತ್ಕಾರದ ಜೊತೆಗೆ ದು:ಖದ ನಿಟ್ಟುಸಿರು. ದೂರವಿದ್ದರೂ ಜೊತೆಗೆ ಸಾಗಿದ ದಾರಿಗಳು. ಇವೆಲ್ಲವೂ ಒಬ್ಬರಿಗೊಬ್ಬರು ಬರೆದ ಪತ್ರಗಳಲ್ಲಿ ಬಿಚ್ಚಿಕೊಳ್ಳುವ ಪ್ರೇಮ ಕಥಾನಕವೇ ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’.
ಈ ನಾಟಕವನ್ನ ಎ.ಆರ್.ಗರ್ನಿಯವರು ಬರೆದಿದ್ದು, ವೆಂಕಟೇಶ್ ಪ್ರಸಾದ್ ರೂಪಾಂತರ ಮತ್ತು ನಿರ್ದೇಶನ ಮಾಡಿದ್ದಾರೆ. ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ನಿರ್ದೇಶಕ ವೆಂಕಟೇಶ್ ಪ್ರಸಾದ್ ಈ ವರ್ಷದ ಮಾರ್ಚ್ ನಲ್ಲಿ ‘ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮೆನ್ಸ್’ ಸಂಸ್ಥೆಯು ತನ್ನ ಹೊಸ ನಾಟಕೋತ್ಸವಕ್ಕೆ ನಮ್ಮ ತಂಡವನ್ನು ಆಹ್ವಾನಿಸಿ, ಹೊಸ ನಾಟಕವೊಂದನ್ನು ಮಾಡಲು ಕೇಳಿಕೊಂಡಿತು. ಹೊಸ ಜಾಗದಲ್ಲಿ ಈ ನಾಟಕೋತ್ಸವ ನಡೆಯಬೇಕಾದ್ದರಿಂದ , ಸಮಯವೂ ಕಡಿಮೆ ಇದ್ದಿದ್ದರಿಂದ ನಾವು ಕಡಿಮೆ ನಟರಿರುವ ನಾಟಕಗಳಿಗೆ ಹುಡುಕಾಟ ಶುರು ಮಾಡಿದೆವು. ಆಗ ಅಕಾಸ್ಮಾತ್ತಾಗಿ ಕಣ್ಣಿಗೆ ಬಿದ್ದಿದ್ದೇ ಎ.ಆರ್.ಗರ್ನಿಯವರು ಬರೆದ ‘ಲವ್ ಲೆಟರ್ಸ್’ ನಾಟಕ. 1986 ರಲ್ಲಿ ಪ್ರಕಟವಾದ ಈ ನಾಟಕ ಸುಮಾರು ದೇಶಗಳಲ್ಲಿ ಪ್ರದರ್ಶನ ಕಂಡು ಜನಪ್ರಿಯಯಾದ ನಾಟಕ. ಪ್ರೇಮಿಗಳಿಬ್ಬರು ತಮ್ಮ ಇಡೀ ಜೀವನದ ಘಟನೆಗಳನ್ನು, ನೋವು ನಲಿವುಗಳನ್ನು , ಗೆಲುವು ಸೋಲುಗಳನ್ನು , ತಾವು ಪರಸ್ಪರ ಬರೆದುಕೊಂಡ ಪತ್ರಗಳ ಮೂಲಕ ಪ್ರೇಕ್ಷಕರ ಮುಂದೆ ತೆರೆದಿಡುತ್ತಾ ಹೋಗುತ್ತಾರೆ. ಇದೊಂದು ಪ್ರೇಮ ಕಥೆ, ಇಬ್ಬರೇ ಕಲಾವಿದರು ಅಭಿನಯಿಸುವ ಕಥೆ. ನಮಗೆ ಬೇಕಾದ ನಾಟಕ ಸಿಕ್ಕಾಗಿತ್ತು
ಆದರೆ ಕೇವಲ ಇಬ್ಬರು ಕಲಾವಿದರೆಂಬ ಕಾರಣಕ್ಕೆ ಈ ನಾಟಕ ತೆಗೆದುಕೊಂಡದ್ದಲ್ಲ. ಬೇರೆ ಕಾರಣಗಳೂ ಸೇರಿಕೊಂಡವು. ಮೊದಲಿಗೆ ಇದೊಂದು ಭಾವನಾತ್ಮಕ ಪ್ರೇಮ ಕಥೆ. ನಮ್ಮ ಸುತ್ತಲಿನ ಇಡೀ ಜಗತ್ತು ಗದ್ದಲ, ಗೊಂದಲದಲ್ಲಿ ಸಿಲುಕಿರುವಾಗ, ದ್ವೇಷದ ಗಾಳಿಯನ್ನೇ ಉಸಿರಾಡಬೇಕಾದ ಸಂದರ್ಭದಲ್ಲಿ , ಒಂದು ಸೌಮ್ಯವಾದ, ಶಾಂತವಾದ ಪ್ರೀತಿಯ ಕಥೆಯೊಂದನ್ನು ಸಮಾಧಾನದಿಂದ ಪ್ರೇಕ್ಷಕರ ಮುಂದೆ ಹೇಳಬೇಕೆನಿಸಿತ್ತು. ಹಲವು ಹತ್ತು ಅಭಿಪ್ರಾಯಗಳಿಂದ ದೂರವಾಗಿ ದ್ವೀಪಗಳಾದ ನಮ್ಮನ್ನು ಕೊನೆಗೂ ಪ್ರೀತಿ ಮಾತ್ರ ಬೆಸೆಯಲು ಸಾಧ್ಯ. ಅದು ಈ ನಾಟಕ ಮಾಡಲು ಮೊದಲ ಕಾರಣ. ಮತ್ತೊಂದು ಕಾರಣ, ನಾವೆಲ್ಲರೂ ಆಗಾಗ ಕೇಳುವ ಮಾತು – personal is political ಎಂದು. ಅದೇನೆಂದು ಈ ನಾಟಕದಲ್ಲಿ ನೋಡಬಹುದು. ಮನುಷ್ಯರ ಬದುಕಿನ ವೈಯಕ್ತಿಕ ಬೇರೆ, ಸಾಮಾಜಿಕ ಬೇರೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ವ್ಯಕ್ತಿಯ ಸಾಮಾಜಿಕ ಶ್ರೇಣಿ, ಲಿಂಗ, ಸ್ಥಾನಮಾನಗಳು, ಬಾಲ್ಯದ ಅನುಭವಗಳು ಆ ವ್ಯಕ್ತಿಯ personal ಅಂದರೆ ವೈಯುಕ್ತಿಕವನ್ನೂ ನಿರ್ಧರಿಸುತ್ತದೆ ಎಂಬುದು ವಾಸ್ತವ. ಅದು ಈ ನಾಟಕದಲ್ಲಿ ಪ್ರಮುಖವಾಗಿ ಕಾಣುವ ಮತ್ತೊಂದು ಅಂಶ ಎಂದು ನಿರ್ದೇಶಕ ವೆಂಕಟೇಶ್ ಪ್ರಸಾದ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇವೆಲ್ಲದರ ಜೊತೆಗೆ ಇದೊಂದು ಪತ್ರ ವಿನಿಮಯದ ನಾಟಕ. ಹೆಸರೇ ಹೇಳುವಂತೆ ಇಬ್ಬರು ಪ್ರೇಮಿಗಳು ತಮ್ಮ ಜೀವನದುದ್ದಕ್ಕೂ ಬರೆದುಕೊಂಡ ಪತ್ರಗಳು ಈ ನಾಟಕದ ಜೀವಾಳ. ಮೊಬೈಲ್ ಮೆಸೇಜುಗಳು, ಸೋಷಿಯಲ್ ಮೀಡಿಯಾಗಳ ಇಂದಿನ ಜಗತ್ತಿನಲ್ಲಿ ಪತ್ರಗಳನ್ನು, ಬರೆಯುವ , ಓದುವ ಅನುಭವ ಖಂಡಿತಾ ಮುದ ನೀಡುವಂತದ್ದು. ಬಾಲ್ಯದಲ್ಲಿ ಪತ್ರಗಳನ್ನು ಬರೆದವರಿಗೆ ಈ ನಾಟಕ ಪತ್ರಗಳ ನೆನಪನ್ನು ತಂದರೆ , ಪತ್ರಗಳನ್ನು ಬರೆಯುವ ಅಭ್ಯಾಸವೇ ಇಲ್ಲದ ಇಂದಿನ ಕಿರಿಯರಿಗೆ ಇದು ಪತ್ರಗಳ ಲೋಕದ ಅಚ್ಚರಿಯನ್ನು ದಾಟಿಸಬಲ್ಲುದೇನೋ !
ಇವೆಲ್ಲ ಕಾರಣಗಳಿಂದ ಈ ನಾಟಕ ಒಂದು ಆಪ್ತವಾದ , ಸುಂದರವಾದ , ಭಾವನಾತ್ಮಕವಾದ ಪ್ರೇಮ ಕಥಾನಕ . ನಾನು ಮೊದಲು ನಿರ್ದೇಶಿಸಿದ ನಾಟಕಗಳಿಗಿಂತ ಭಿನ್ನವಾದ ನಾಟಕವಾದರೂ ಅಷ್ಟೇ ಮುಖ್ಯವಾದ ನಾಟಕ ಇದೆಂದು ನನಗೆ ನಂಬಿಕೆ ಇದೆ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.
Key words: ‘Love Letters-My Beloved One, Drama, Mysore, August 31