ಜಿಡಿಪಿ ಕುಸಿತದಿಂದ ದೇಶದ ಅರ್ಥ ವ್ಯವಸ್ಥೆಗೆ 47.8 ಲಕ್ಷ ಕೋಟಿಯಷ್ಟು ನಷ್ಟ- ಪ್ರಧಾನಿ ಮೋದಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ…

ಮೈಸೂರು,ಸೆಪ್ಟಂಬರ್,6,2020(www.justkannada.in): ದೇಶದ ಜಿಡಿಪಿ ಮೈನಸ್ 23.9 ಕ್ಕೆ ತಲುಪಿದೆ. ಜಿಡಿಪಿ ಈ ಹಂತಕ್ಕೆ ತಲುಪಿರುವುದು ಆತಂಕಕಾರಿ ಬೆಳವಣಿಗೆ. ಜಿಡಿಪಿ ಕುಸಿತದಿಂದ ದೇಶದ ಅರ್ಥ ವ್ಯವಸ್ಥೆಗೆ 47.8 ಲಕ್ಷ ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ದೇಶದ ಆರ್ಥಿಕ ವ್ಯವಸ್ಥೆ, ಜಿಎಸ್ಟಿ ಕುರಿತು ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ದೇಶದ ಜಿಡಿಪಿ ಮೈನಸ್ 23.9 ಕ್ಕೆ ತಲುಪಿದೆ. ಮನಮೋಹನ್ ಸಿಂಗ್ ಅವರು ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಜಿಡಿಪಿ 7.3 ಇತ್ತು. ಜಿಡಿಪಿ ಕುಸಿತದಿಂದ ದೇಶದ ಅರ್ಥ ವ್ಯವಸ್ಥೆಗೆ 47.8 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ನೋಟ್ ಬ್ಯಾನ್, ಅವೈಜ್ಞಾನಿಕ ಜಿಎಸ್ಟಿ, ಅವೈಜ್ಞಾನಿಕವಾದ ಲಾಕ್ ಡೌನ್, ಸರ್ಕಾರದ ಸಂಸ್ಥೆಗಳ ಖಾಸಗೀಕರಣದಿಂದ ದೇಶದ ಅರ್ಥ ವ್ಯವಸ್ಥೆಗೆ ಕೊಡಲಿ ಪೆಟ್ಟು ಬಿದ್ದಿದೆ. ಇಂದಿನ ಆರ್ಥಿಕತೆಯ ದುಃಸ್ಥಿತಿಗೆ ನರೇಂದ್ರ ಮೋದಿಯರ ಸರ್ಕಾರವೇ ಕಾರಣ ಎಂದು ಕಿಡಿಕಾರಿದರು.

ಡ್ರಗ್ಸ್ ನಂಟಿನ ಹಿನ್ನೆಲೆಯಲ್ಲಿ ನಟಿ ರಾಗಿಣಿ ಬಂಧನ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ರಾಜ್ಯದಲ್ಲಿ ಡ್ರಗ್ಸ್  ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ. ನಟಿ ರಾಗಿಣಿಗೆ ಬಿಜೆಪಿಯವರಿಗೆ ಒಡನಾಟವಿದೆ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ವಿಜಯೇಂದ್ರ ಜೊತೆ ನಟಿ ಭಾಗಿಯಾಗಿದ್ದರು. ಆದರೆ ಬಿಜೆಪಿಯವರು ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ. ತನಿಖೆ ನಡೆದರೆ ಇದರಲ್ಲಿ ಶಾಮೀಲಾಗಿರುವವರ ಪ್ರಭಾವಿಗಳ ಮುಖವಾಡ ಬಯಲಾಗಲಿದೆ. ಆದ್ದರಿಂದ ತನಿಖೆ ಪಾರದರ್ಶಕವಾಗಿ ನಡೆಸಬೇಕು ಎಂದು ಆಗ್ರಹಿಸಿದರು.loss – country- economy- - GDP- collapse-KPCC- spokesperson –M. Laxman

ರಾಜ್ಯಕ್ಕೆ ನೀಡಬೇಕಾದ ಜಿಎಸ್ಟಿ ಹಣವನ್ನು ಇನ್ನೂ ನೀಡಿಲ್ಲ- ಮಂಜುಳಾ ಮಾನಸ…

ಇದೇ ವೇಳೆ ಮಾತನಾಡಿದ ಮಂಜುಳಾ ಮಾನಸ ಅವರು, ರಾಜ್ಯಕ್ಕೆ ನೀಡಬೇಕಾದ ಜಿಎಸ್ಟಿ ಹಣವನ್ನು ಇನ್ನೂ ನೀಡಿಲ್ಲ. ರಾಜ್ಯಕ್ಕೆ 4 ತಿಂಗಳಿಂದ ಬರಬೇಕಾದ ಜಿಎಸ್ಟಿ 13,764 ಕೋಟಿ ರೂ. ಹಣವನ್ನು ನೀಡದೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡಾಗಿನಿಂದ ಸುಮಾರು 43 ಸಾವಿರ ಕೋಟಿ ಹಣವನ್ನು ಆರ್ ಬಿಐನಿಂದ ಸಾಲ ಮಾಡಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಅವೈಜ್ಞಾನಿಕ ನೀತಿ ನಿಯಮಗಳಿಂದ ದೇಶದಲ್ಲಿ 4.5 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ 35 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಸುಳ್ಳು ಹೇಳುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಮಂಜುಳಮಾನಸ ಹರಿಹಾಯ್ದರು.

 

Key words: loss – country- economy- – GDP- collapse-KPCC- spokesperson –M. Laxman