ರಾಜ್ಯಾದ್ಯಂತ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ, ದಾಖಲೆ ಪರಿಶೀಲನೆ.

ಬೆಂಗಳೂರು,ಜೂನ್,28,2023(www.justkannada.in):  ರಾಜ್ಯಾದ್ಯಂತ ಇಂದು ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಭ್ರಷ್ಟಾಚಾರ ಆರೋಪಗಳು ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯ ಹಲವೆಡೆ ದಾಳಿ ಮಾಡಿದ್ದು, ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬೆಂಗಳೂರು, ರಾಮನಗರ, ಬಾಗಲಕೋಟೆ, ಬೆಳಗಾವಿ, ತುಮಕೂರು, ಕಲಬುರಗಿ, ಯಾದಗಿರಿ, ಕೋಲಾರ ಸೇರಿದಂತೆ ಇನ್ನು ಇತರೆ ಜಿಲ್ಲೆಗಳಲ್ಲೂ ಲೋಕಾಯುಕ್ತ ದಾಳಿಯಾಗಿದೆ.

ಬೆಂಗಳೂರಿನ ಕೆ.ಆರ್​​.ಪುರಂ ತಹಶೀಲ್ದಾರ್​ ಅಜಿತ್​​ ರೈ ಮನೆ ಸೇರಿದಂತೆ 10 ಕಡೆ ಲೋಕಾಯುಕ್ತ ದಾಳಿ ಮಾಡಿದ್ದು, ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ. ದಾಳಿ ವೇಳೆ ಅಜಿತ್ ಮನೆಯಲ್ಲಿ ಲಕ್ಷಾಂತರ ರೂ. ನಗದು ಪತ್ತೆಯಾಗಿದೆ. ಅಜಿತ್ ಕೆಲ ದಿನಗಳ ಹಿಂದೆ ಕೆ.ಆರ್​.ಪುರಂನಿಂದ ವರ್ಗಾವಣೆಯಾಗಿದ್ದ . ಇವರ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಇನ್ನು ಬೆಳಗಾವಿ ನಗರದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂ ‌ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ಮನೆ ಮೇಲೆ ದಾಳಿ ಮಾಡಲಾಗಿದೆ. ಸದ್ಯ ಶೇಖರ್ ಬಹುರೂಪಿ ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೇಖರ್ ಬಹುರೂಪಿ ಅವರು 2019ರಲ್ಲಿ ಅಥಣಿಯಲ್ಲಿ ಕಾರ್ಯನಿರ್ವಹಿಸುವಾಗ ಪ್ರವಾಹದ ಸಂದರ್ಭದಲ್ಲಿ ನಡೆದ ಅವ್ಯವಹಾರ ಸಂಬಂಧ ಅಮಾನತುಗೊಂಡಿದ್ದರು.

ಬಾಗಲಕೋಟೆ ಕೃಷಿ ಜೆಡಿ ಚೇತನಾ ಪಾಟಿಲ್ ಮನೆಯಲ್ಲಿ ಲೋಕಾಯುಕ್ತ ದಾಳಿ ಮಾಡಿದೆ. ಬಾಗಲಕೋಟೆ ವಿದ್ಯಾಗಿರಿಯ ಅಕ್ಕಿಮರಡಿ ಲೆಔಟ್ ನಲ್ಲಿರುವ ಚೇತನಾ ಪಾಟಿಲ್ ಅವರ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಚೇತನಾ ಪಾಟೀಲ್ ಮನೆಯಲ್ಲಿ ಎರಡು ಆಮೆಗಳು ಪತ್ತೆಯಾಗಿವೆ. ಇನ್ನು ಲ್ಯಾಪ್‌ಟಾಪ್​ನಲ್ಲೂ ಮಾಹಿತಿಗಳನ್ನು ಹುಡುಕುತ್ತಿದ್ದಾರೆ.

ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರು ಮನೆಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ವಿದ್ಯಾಗಿರಿಯ 18ನೇ ಕ್ರಾಸ್​ನಲ್ಲಿರುವ ಕೃಷ್ಣಾ ಶಿರೂರು ಮನೆ.

ತುಮಕೂರಿನಲ್ಲಿ ಕೃಷಿ ಇಲಾಖೆ ಜೆಡಿ  ನಿವಾಸದ ಮೇಲೆ  ದಾಳಿ.

ತುಮಕೂರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಅವರ ನಿವಾಸ ಹಾಗೂ ಫಾರಂ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ದಾಖಲೆ ಪರಿಶೀಲಿಸುತ್ತಿದ್ದಾರೆ. ತುಮಕೂರಿನ ಶಂಕರಪುರದಲ್ಲಿರುವ ನಿವಾಸ ಹಾಗೂ ರಾಮನಗರದ ಫಾರಂ ಹೌಸ್ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆಯಲ್ಲಿ ತೊಡಗಿದ್ದಾರೆ. ತುಮಕೂರು ಕೃಷಿ ಇಲಾಖೆಯಲ್ಲಿ ಜೆಡಿ ಆಗಿ ಕೆಲಸ ನಿರ್ವಹಿಸುತ್ತಿರುವ ರವಿ, ಹಾಸನದಿಂದ ತುಮಕೂರಿಗೆ ವರ್ಗಾವಣೆಯಾಗಿದ್ದರು.

ಕೋಲಾರದಲ್ಲಿ KRDL ಎಇಇ ಕೋದಂಡರಾಮಯ್ಯ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರದ ಕುವೆಂಪು ನಗರದ ಮನೆ ಸೇರಿ ಐದು ಕಡೆ ದಾಳಿಯಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಕೋಲಾರ ಲೋಕಾಯುಕ್ತ ಎಸ್​​ಪಿ ಉಮೇಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ರಾಯಚೂರು ಜಿಲ್ಲೆ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಸಿಂಧನೂರು ಪಟ್ಟಣದ ಕಚೇರಿ ಮತ್ತು ಮನೆ ಹಾಗೂ ಕಲಬುರಗಿಯ ನಾಗನಹಳ್ಳಿ-ಖಣದಾಳ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ.

Key words: Lokayukta -raids -houses – officials- across –state