5ನೇ ಹಂತದ ಲೋಕಸಮರ: 7ರಾಜ್ಯ 51 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆರಂಭ: ಘಟಾನುಘಟಿಗಳಿಂದ ಮತದಾನ

ನವದೆಹಲಿ: ಮೇ-5: ಉತ್ತರ ಪ್ರದೇಶ ಪ್ರಮುಖ ಕ್ಷೇತ್ರಗಳು ಸೇರಿದಂತೆ 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಇಂದು 5ನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಉತ್ತರಪ್ರದೇಶ(14), ರಾಜಸ್ಥಾನ(12), ಪಶ್ಚಿಮ ಬಂಗಾಳ(7), ಮಧ್ಯಪ್ರದೇಶ(7), ಬಿಹಾರ(5), ಜಾರ್ಖಂಡ್(4) ಹಾಗೂ ಜಮ್ಮು-ಕಾಶ್ಮೀರದಲ್ಲಿ ಲಡಾಖ್, ಅನಂತ್​ನಾಗ್ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಬೆಳಗ್ಗೆ 7ರಿಂದ ಆರಂಭವಾಗಿರುವ ಮತದಾನ ಸಂಜೆ 6ಕ್ಕೆ ಕೊನೆಗೊಳ್ಳಲಿದೆ. ಒಟ್ಟಾರೆ 8.75 ಕೋಟಿ ಮತದಾರರು 674 ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನು ಮತದಾರರು ಇಂದು ಬರೆಯಲಿದ್ದಾರೆ.

ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಸ್ಪರ್ಧಿಸಿರುವ ಲಖನೌ, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸ್ಪರ್ಧಿಸಿರುವ ಅಮೇಠಿ, ಕಾಂಗ್ರೆಸ್​ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಸ್ಪರ್ಧಿಸಿರುವ ರಾಯ್​ಬರೇಲಿ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಈ ಬಾರಿ ಹಂತದಿಂದ ಹಂತಕ್ಕೆ ಮತದಾನ ಇಳಿಕೆಯಾಗಿರುವುದರಿಂದ ಐದನೇ ಹಂತದ ಮತ ಪ್ರಮಾಣ ಹೇಗಾಗಬಹುದು ಎಂಬ ಕುತೂಹಲವಿದೆ. ಮೇ 11 ಹಾಗೂ 19ರಂದು ಕೊನೆಯ ಎರಡು ಹಂತದ ಮತದಾನ ನಡೆಯಲಿದೆ.

ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಲಖನೌನ ಸ್ಕಾಲರ್ಸ್​ ಹೋಂ ಸ್ಕೂಲ್​ನ ಮತಗಟ್ಟೆ ಸಂಖ್ಯೆ 333ರಲ್ಲಿ ಮತಚಲಾಯಿಸುವ ಮೂಲಕ ಸಂಭ್ರಮ ಆಚರಿಸಿದರು. ತಮ್ಮ ಹಕ್ಕು ಚಲಾಯಿಸಿದ ಬಳಿಕ ಎಡಗೈ ತೋರುಬೆರಳಿಗೆ ಹಚ್ಚಿಸಿಕೊಂಡಿದ್ದ ಮಸಿ ಗುರುತನ್ನು ಪ್ರದರ್ಶಿಸಿದರು.

ರಾಜಸ್ಥಾನದ ಜೈಪುರದ ಮತಗಟ್ಟೆಯಲ್ಲಿ ಕೇಂದ್ರ ಸಚಿವ ರಾಜ್ಯವರ್ಧನ್​ ಸಿಂಗ್​ ರಾಥೋಡ್​ ಮತ್ತವರ ಪತ್ನಿ ಗಾಯತ್ರಿ ರಾಥೋಡ್​ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು.

ಹಜಾರಿಬಾಗ್​ ಲೋಕಸಭಾ ಕ್ಷೇತ್ರದಲ್ಲಿನ ಮತಗಟ್ಟೆಯೊಂದರಲ್ಲಿ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಮತ್ತವರ ಪತ್ನಿ ನೀಲಿಮಾ ಸಿನ್ಹಾ ಅವರ ಮತದಾನ ಮಾಡಿದರು.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಪೈಪೋಟಿ ನಡೆಸುತ್ತಿರುವ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿನ ಮತಗಟ್ಟೆಗೆ ಅರೆಮಿಲಿಟರಿ ಪಡೆ ಯೋಧರ ನೇಮಕ ಮಾಡಲಾಗಿದ್ದು, ಬಿಗಿ ಭದ್ರತೆ ನಡುವೆ ಮತದಾನ ನಡೆಯಿತ್ತಿದೆ.
ಕೃಪೆ:ವಿಜಯವಾಣಿ

5ನೇ ಹಂತದ ಲೋಕಸಮರ: 7ರಾಜ್ಯ 51 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆರಂಭ: ಘಟಾನುಘಟಿಗಳಿಂದ ಮತದಾನ
lok-sabha-elections-2019-51-parliamentary-constituencies-across-7-states-for-5th-phase